ಶರಣ ಸಾಹಿತ್ಯಕ್ಕೆ ಹಳಕಟ್ಟಿಯವರ ಕೊಡುಗೆ ಅವಿಸ್ಮರಣೀಯ
ಕಲಬುರಗಿ:ಜು.4: ಇಡೀ ವಿಶ್ವದಲ್ಲಿಯೇ ಅದ್ಭುತವಾದ, ಬದುಕನ್ನು ಕಟ್ಟಿಕೊಡುವ ಶ್ರೇಷ್ಠವಾದ ವಚನ ಸಾಹಿತ್ಯವನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಅಮೂಲ್ಯವಾದ ಈ ಸಂಪತ್ತನ್ನು ದೊರೆಯುವಂತೆ ಮಾಡಿದ ವಚನಶಾಸ್ತ್ರ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಕೊಡುಗೆ ತುಂಬಾ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಆಶಯ ವ್ಯಕ್ತಪಡಿಸಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಡಾ.ಫ.ಗು.ಹಳಕಟ್ಟಿಯವರ ಜನ್ಮದಿನಾಚರಣೆ’ಯ ‘ವಚನ ಸಂರಕ್ಷಣಾ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಹಳಕಟ್ಟಿಯವರ ಸ್ಮರಣೆಯಲ್ಲಿಯೇ ಒಂದು ದೊಡ್ಡ ಅನುಭಾವವಿದೆ. ಅಂದಿನ ಕ್ಲಿಷ್ಟಕರ ಪರಿಸ್ಥಿಯಲ್ಲಿ ವಿನಾಶದ ಅಂಚಿನಲ್ಲಿದ್ದ ವಚನಗಳ ಹಸ್ತಪ್ರತಿಗಳನ್ನು ಸಂರಕ್ಷಿಸಿ, ಪ್ರಕಟಿಸಿ, ಪ್ರಚಾರಗೊಳಿಸುವ ಮೂಲಕ ಇಂತಹ ಅಮೂಲ್ಯವಾದ ವಚನ ಸಂಪತ್ತನ್ನು ನಮಗೆ ದೊರೆಯುವಂತೆ ಮಾಡುವ ಮೂಲಕ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಿದರೆ ಅವರ ಕೊಡುಗೆಯ ವ್ಯಾಪಕವಾದ ಪ್ರಚಾರ ದೊರೆಯಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಮಾತನಾಡಿ, ಹಳಕಟ್ಟಿಯವರು ನಮ್ಮ ಜೊತೆ ದೈಹಿಕವಾಗಿರದಿದ್ದರೂ ಕೂಡಾ, ಅವರು ಮಾಡಿದ ಸಮಾಜಮುಖಿ ಕಾರ್ಯಗಳು ಹಾಗೂ ನೀಡಿದ ಕೊಡುಗೆಗಳಿಂದ ಅವರನ್ನು ಸಮಾಜ ಎಂದಿಗೂ ಮರೆಯದಂತೆ ಮಾಡಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಐಶ್ವರ್ಯ ಬಿರಾದಾರ, ಪೂಜಾ ಜಮಾದಾರ, ಪೂಜಾ ಹೂಗಾರ ಹಾಗೂ ವಿದ್ಯಾರ್ಥಿಗಳು ಇದ್ದರು.