ಬಿಜೆಪಿ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ
ಜೇವರ್ಗಿ,ಜು.4-ಬಿಜೆಪಿ ಮುಖಂಡ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ ಇಂದು ನಿಧನರಾದರು.
ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೂಲತ: ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದವರಾದ ದೊಡ್ಡಮನಿ ಅವರು, ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.
ಜೇವರ್ಗಿ ತಾಲೂಕಿನಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸುವಲ್ಲಿ ಸಾಕಷ್ಟು ಶ್ರಮಿಸಿದ್ದ ಅವರು, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ವಿರುದ್ಧ ಚುನಾವಣೆಗೆ ನಿಂತು ಸೋತಿದ್ದರು.
1997-98 ರಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ಅವರು, ರಾಜಕೀಯವಾಗಿ ಹಂತ ಹಂತವಾಗಿ ಬೆಳೆಯುತ್ತಾ ಕೊನೆಗೆ ಬಿಜೆಪಿ ಸರ್ಕಾರದಲ್ಲಿ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಒಂದು ಪಕ್ಷದಲ್ಲಿ ಇದ್ದುಕೊಂಡು ತನ್ನ ಜೀವನದ ಕೊನೆ ಉಸಿರು ಇರುವರೆಗೂ ಪಕ್ಷದ ಬೆಳವಣಿಗೆಗಾಗಿ ದುಡಿದ ಧರ್ಮಣ್ಣ ದೊಡ್ಡಮನಿ ಅವರು, ಪಕ್ಷವನ್ನು ಬದಲಿಸದೆ ಒಂದೇ ಪಕ್ಷದಲ್ಲಿ ಇದ್ದು ಪಕ್ಷದ ನಿಷ್ಠಾವಂತ ಕಾರ್ಯಕರ್ತರೆನಿಸಿಕೊಂಡಿದ್ದರು.
ಧರ್ಮಣ್ಣ ದೊಡ್ಡಮನಿಯವರ ನಿಧನಕ್ಕೆ ಶಾಸಕ, ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಬಿಜೆಪಿ ತಾಲ್ಲೂಕ ಅಧ್ಯಕ್ಷ ದೇವೇಂದ್ರ ಮುತ್ತಕೋಡ, ಕರ್ನಾಟಕ ಪ್ರದೇಶ ಕುರುಬ ಸಮಾಜದ ತಾಲೂಕ ಅಧ್ಯಕ್ಷ ಸಾಯಬಣ್ಣ ದೊಡ್ಮನಿ, ಮುಖಂಡರಾದ ಬೈಲಪ್ಪ ನೆಲೋಗಿ, ತಿಪ್ಪಣ್ಣ ಬಳಬಟ್ಟಿ, ಪ್ರಧಾನ ಕಾರ್ಯದರ್ಶಿ ನಿಂಗಣ್ಣ ರದ್ದೇವಾಡಗಿ, ರಾಜಶೇಖರ್ ಮುತ್ತಕೋಡ, ನಿಂಗಣ್ಣ ಭಂಡಾರಿ, ಮಲ್ಲಿಕಾರ್ಜುನ್ ತಾಳಿಕೋಟಿ, ನಿಂಗರಾಜ್ ಮಾಸ್ಟರ್, ಭೀಮಶಂಕರ್ ಜನಿವರ್, ರಾಜು ರದ್ದೇವಾಡಗಿ, ಸಂತೋಷ್ ಮಾಲಿ ಪಾಟೀಲ್, ಚಂದ್ರಶೇಖರ್ ನೆರಡಗಿ, ಸಿದ್ದಣ್ಣ ಮಯೂರ್, ಮಾಳು ಹಿಪ್ಪರಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.