ಹಾಲು, ಪೆಟ್ರೋಲ್, ಡಿಸೇಲ್, ಪಂಪ್‍ಸೆಟ್ ವಿದ್ಯುತ್ ದರ ಹೆಚ್ಚಳ ಖಂಡಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
ವಿಜಯಪುರ,ಜು.4:ಹಾಲಿನ ದರ, ಪಂಪಸೆಟ್‍ಗಳ ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಅವರು ಮಾತನಾಡಿ, ಹಾಲಿನ ದರ ಹೆಚ್ಚಳ ಮಾಡಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೂಡಾ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕ ಪ್ರಮಾಣದ ಹಣವನ್ನು ಸ್ವೀಕರಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನ ಕುಂಠಿತವಾಗುತ್ತಿದೆ. ದಿಢೀರ ಡಿಸೈಲ್ ಬೆಲೆ ಏರಿಕೆಯಿಂದ ಯಂತ್ರೋಪಕರಣಗಳ ಮೂಲಕ ನಡೆಸುವ ಕೃಷಿ ಕೆಲಸಗಳಿಗೆ ರೈತರು ದುಬಾರಿ ಬಾಡಿಗೆ ಹಣ ನೀಡುತ್ತಿದ್ದಾರೆ. ಇದರಿಂದಾಗಿ ಅವರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ ಎಂದು ತಿಳಿಸಿದರು.
ರೈತ ಮಕ್ಕಳ ವಿದ್ಯಾನಿಧಿ ಯೋಜನೆ ಸ್ಥಗಿತಗೊಳಿಸಿದ್ದರಿಂದ ಮಕ್ಕಳ ಕಲಿಕೆಗೂ ತೊಂದರೆಯಾಗುತ್ತಿದೆ ಎಂದೂ ಅವರು ನುಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್, ಪಾಟೀಲ ಮಾತನಾಡಿ, ಸರಕಾರ ಬೀಜ ಮತ್ತು ರಸ ಗೊಬ್ಬರ ದರ ಏರಿಸುವ ಮೂಲಕ ರೈತರಿಗೆ ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಕಳೆದ ಒಂದು ದಶಕದಿಂದ ಕನಿಷ್ಟ 200ರೂ ಗಳಿಗೆ 1 ಕೆ.ಜಿ ಬಿತ್ತನೆ ಬೀಜ ಲಭ್ಯವಾಗುತ್ತಿತ್ತು. ಸರಕಾರ ಇದಕ್ಕೆ 25ರೂ ಗಳನ್ನು ಮಾತ್ರ ಸಹಾಯಧನ ನೀಡುತ್ತಿತ್ತು. ಇಂದು ಅದೇ ಬಿತ್ತನೆ ಬೀಜ 800 ರೂ ಗಳಿಗೂ ಅಧಿಕ ದರದಲ್ಲಿ ಸಿಗುತ್ತಿದೆ. ಆದರೆ ಸಕಾರದ ಸಹಾಯ ಧನ ಮಾತ್ರ ಹೆಚ್ಚಳವಾಗಿಲ್ಲ. ಇದರಿಂದ ರೈತರಿಗೆ ಇನ್ನಷ್ಷು ಆರ್ಥಿಕ ಹೊರೆಯಾಗುತ್ತಿದೆ. ರೈತರಿಗೆ ಸಹಾಯಧನವನ್ನು ಶೇ.75ರಷ್ಟು ಅಥವಾ ಶೇ.50ರಷ್ಟು ನೀಡಿ ಕೃಷಿ ಕ್ಷೇತ್ರಕ್ಕೆ ಉತ್ತೇಜನಗೊಳಿಸಬೇಕಾಗಿದೆ. ಅಂದಾಗ ಮಾತ್ರ ಈ ಯೋಜನೆಗೆ ಒಂದು ಅರ್ಥ ಸಿಗಲಿದೆ ಇಲ್ಲವಾದರೆ ಹೆಸರಿಗೆ ಮಾತ್ರ ಈ ಯೋಜನೆ ಆಗಲಿದೆ ಎಂದು ತಿಳಿಸಿದರು.
ಚಂದ್ರಶೇಖರ ಕವಟಗಿ, ಈರಣ್ಣ ರಾವೂರ, ಮಾಳುಗೌಡ ಪಾಟೀಲ, ಬಾಲರಾಜ ರೆಡ್ಡಿ, ರಾಜಶೇಖರ ಡೊಳ್ಳಿ, ಸುರೇಶ ಬಿರಾದಾರ, ರೇಣುಕಾ ಪರಸಪ್ಪಗೌಳ, ರಾಚಪ್ಪ ಬಿರಾದಾರ, ಡಿ.ಜಿ. ಬಿರಾದಾರ, ಅಶ್ವಿನಿ ಪಟ್ಟಣಶೆಟ್ಟಿ, ಕುಮಾರ ನಿಡೋಣಿ, ಸ್ವಪ್ನಾ ಕಣಮುಚನಾಳ, ಪಾಂಡುಸಾಹುಕಾರ ದೊಡಮನಿ ಮತ್ತಿತರರು ಇದ್ದರು.