‘ಜೀತದಾಳು’ ಸ್ಥಿತಿಯಿಂದ ನಮಗೆ ಮುಕ್ತಿ ನೀಡಿ
ಪುತ್ತೂರು: ಸರ್ಕಾರಿ ಇಲಾಖೆಗಳ ಪೈಕಿ ಅತ್ಯಂತ ಪ್ರಮುಖವಾಗಿ ಜನತೆಗೆ ಬೇಕಾದ ಗ್ರಾಮ ಆಡಳಿತಾಧಿಕಾರಿಗಳಿಗೆ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲ. ಕೆಲಸದ ಒತ್ತಡದಿಂದ ಬಳಲುತ್ತಿರುವ ಸ್ಥಿತಿ ನಮ್ಮದಾಗಿದೆ. ಜೀತದಾಳುಗಳಂತೆ ಬದುಕುವ ಪರಿಸ್ಥಿತಿಯಿಂದ ನಮಗೆ ಮುಕ್ತಿಬೇಕು ಎಂದು ಗ್ರಾಮ ಆಡಳಿತಾಧಿಕಾರಿಗಳ ರಾಜ್ಯ ಸಂಘದ ಸಂಘಟನಾ ಪ್ರತಿನಿಧಿ ನರಿಯಪ್ಪ ಮಠದ್ ಸರ್ಕಾರವನ್ನು ಆಗ್ರಹಿಸಿದರು.
ಪುತ್ತೂರು ತಾಲೂಕು ಆಡಳಿತಸೌಧದ ಮುಂಭಾಗದಲ್ಲಿ ಗುರುವಾರ ರಾಜ್ಯಸಂಘದ ಕರೆಯ ಹಿನ್ನಲೆಯಲ್ಲಿ ನಡೆದ ಅನಿರ್ಧಿಷ್ಠಾವಧಿ ಮುಷ್ಕರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಆರೋಗ್ಯಕರ ವಾತಾವರಣ ಬೇಕಾಗಿದೆ. ವ್ಯಕ್ತಿಯ ಜನನದಿಂದ ಮರಣದ ತನಕ ಬಹುತೇಕ ಎಲ್ಲಾ ಸೇವೆಗಳನ್ನು ನೀಡುತ್ತಿರುವ ನಮಗೆ ಕನಿಷ್ಠ ಸ್ವಂತ ಕಚೇರಿಗಳಿಲ್ಲ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಮೊಬೈಲ್ ಆಪ್, ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಕ್ಯಾನರ್, ಪ್ರಿಂಟರ್ ಇಂತಹ ಯಾವುದೇ ಪರಿಕರಗಳನ್ನು ನೀಡಲಾಗಿಲ್ಲ.
ಮಾತೃ ಇಲಾಖೆಯೂ ಸೇರಿದಂತೆ ೩೬ ಇಲಾಖೆಗಳಿಗೆ ಜಾಗ ಮಂಜೂರು ಮಾಡುವ ನಮಗೆ ಒಂದು ಕಚೇರಿಗೂ ಗತಿ ಇಲ್ಲದಂತಾಗಿದೆ.
ಕೃಷಿ ಇಲಾಖೆಯಿಂದ ಹಿಡಿದು ಎಲ್ಲಾ ಇಲಾಖೆಗಳಿಗೂ ಪೂರಕವಾಗಿ ಗ್ರಾಮ ಮಟ್ಟದಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ಕಳೆದ ೧ ವರ್ಷದಲ್ಲಿ ಕೆಲಸದ ಒತ್ಡಡದಿಂದ ಮಾನಸಿಕಸ್ಥಿತಿಯಲ್ಲಿ ಏರುಪೇರಾಗಿ ಕೆಲವು ಗ್ರಾಮ ಆಡಳಿತಾಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ರಜೆಯ ದಿನಗಳಲ್ಲೂ ನಮಗೆ ಕೆಲಸದ ಒತ್ತಡ. ವೈಯುಕ್ತಿಕ ಜೀವನವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ರ್‍ಯಾಂಕಿಂಗ್ ಪದ್ಧತಿಯಿಂದ ನಾವು ಜೀತದಾಳುಗಳಾಗಿದ್ದೇವೆ. ಈ ಸ್ಥಿತಿಯನ್ನು ಬದಲಾಯಿಸಿ ನಾವೂ ಇತರ ಸರ್ಕಾರಿ ನೌಕರರಂತೆ ಕೆಲಸ ಮಾಡಿ ನೆಮ್ಮದಿ ಬದುಕು ಕಂಡುಕೊಳ್ಳಲು ಅವಕಾಶ ಬೇಕು ಎಂದು ಅವರು ಹೇಳಿದರು.
ತಾಲೂಕು ಸಂಘದ ಕಾರ್ಯದರ್ಶಿ ಜಯಚಂದ್ರ ಮಾತನಾಡಿ, ಕೆಲಸ ಅವಧಿಯಲ್ಲಿ ನಾವು ಯಾವುದೇ ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ ಸಂಜೆ ೫.೩೦ ಗಂಟೆಯ ನಂತರವೂ ನಮ್ಮನ್ನು ದುಡಿಸಬೇಡಿ. ಪತಿ-ಪತ್ನಿ ಪ್ರಕರಣಗಳನ್ನು ಪರಿಗಣಿಸಿ ವರ್ಗಾವಣೆಗೆ ಅವಕಾಶ ನೀಡಿ. ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಪರಿಣಾಮ ಶೇ೬೮ ಮಂದಿಗೆ ಗ್ರಾಮ ಆಡಳಿತಾಧಿಕಾರಿಗಳಿಗೆ ಬಿ.ಪಿ, ಶುಗರ್ ಖಾಯಿಲೆ ಅಂಟಿಕೊಂಡು ಬಳಲುವಂತಾಗಿದೆ. ಅಂತರ್ ಜಿಲ್ಲಾ ವರ್ಗಾವಣೆ ರದ್ದು ಮಾಡಿ ನಮಗೆ ನಮ್ಮ ಊರಿನಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನಿಯೋಜನೆಗೊಂಡವರಿಗೆ ಸಂಬಳವಿಲ್ಲ…
ಬೇರೆ ಬೇರೆ ಆರೋಗ್ಯ ಕಾರಣಗಳಿಂದ ನಿಯೋಜನೆಗೊಂಡು ಕೆಲಸ ಮಾಡುತ್ತಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಇಲಾಖೆ ಸಂಬಳ ನೀಡುತ್ತಿಲ್ಲ. ಪುತ್ತೂರಿನಲ್ಲಿ ನಿಯೋಜನೆ ಮೇಲೆ ಕೆಲಸ ನಿರ್ವಹಿಸುತ್ತಿರುವ ಇಬ್ಬರು ಗ್ರಾಮ ಆಡಳಿತಾಧಿಕಾರಿಗಳ ಪೈಕಿ ಒಬ್ಬರಿಗೆ ಕಳೆ ಮಾರ್ಚ್ ತಿಂಗಳಿನಿಂದ ಸಂಬಳ ನೀಡಲಾಗಿಲ್ಲ. ಇನ್ನೋರ್ವರಿಗೆ ಕಳೆದ ಎರಡು ತಿಂಗಳಿನಿಂದ ಸಂಬಳ ದೊರೆತಿಲ್ಲ ಎಂಬ ನೋವನ್ನೂ ಗ್ರಾಮ ಆಡಳಿತಾಧಿಕಾರಿಗಳು ತೋಡಿಕೊಂಡರು.
ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ, ಉಪಾಧ್ಯಕ್ಷೆ ಸುಜಾತ ರೈ, ಖಜಾಂಜಿ ಅಶ್ವಿನಿ ಕೆ., ಸಂಘಟನಾ ಕಾರ್ಯದರ್ಶಿ ಶರಣ್ಯ ಸೇರಿದಂತೆ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು.
ಗ್ರಾಮ ಆಡಳಿತ ಅಧಿಕಾರಿಗಳು ತಾಂತ್ರಿಕ ಹುದ್ದೆಗಳ ವೇತನ ಶ್ರೇಣಿಗೆ ಆಗ್ರಹಿಸಿ ಪ್ರತಿಭಟನೆ
ಕುಂದಾಪುರ,-ಕುಂದಾಪುರ ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ತಾಂತ್ರಿಕ ಹುದ್ದೆಗಳ ವೇತನ ಶ್ರೇಣಿಗೆ ಆಗ್ರಹಿಸಿ ಗುರುವಾರ ಕುಂದಾಪುರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕಂದಾಯ ಇಲಾಖೆಯಿಂದ ನಿರಂತರವಾಗಿ ಸರ್ಕಾರದಿಂದ ಅಭಿವೃದ್ದಿಪಡಿಸಿರುವ ಹಕ್ಕುಪತ್ರ, ಆಧಾರ್ ಸೀಡ್, ಬೆಳೆ ಕಟಾವು ಮೊಬೈಲ್ ಆಪ್, ಭೂಮಿ, ದಿಶಾಂಕ್ ಸೇರಿದಂತೆ ಸುಮಾರು ೨೧ ಎಲ್ಲಾ ವೆಬ್/ಮೊಬೈಲ್ ತಂತ್ರಾಂಶಗಳ ಮೂಲಕ ಹಾಗೂ ಸಿ-ವೃಂದದ ನೌಕರರ ಹತ್ತು ಪಟ್ಟು ಕೆಲಸಗಳನ್ನು ನಿರ್ವಹಿಸುತ್ತಿದ್ದು, ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳ ವೇತನ ಶ್ರೇಣಿ ನೀಡಬೇಕು.
ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿ ಸೌಲಭ್ಯಗಳನ್ನು ಕಲ್ಪಿಸಬೇಕು, ತಂತ್ರಾಂಶಗಳಿಗೆ ಸಂಬಂಧಿಸಿದ ಎಲ್ಲಾ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯಬೇಕು, ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕಬಾರದು, ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರೀ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮಾತನಾಡಿ, ಒಂದು ಕಡೆ ಅಧಿಕಾರಿಗಳ ಕೊರತೆ, ಇನ್ನೊಂದು ಕಡೆ ಮೂಲಭೂತ ಸೌಲಭ್ಯಗಳ ಕೊರತೆ, ಮತ್ತೊಂದು ಕಡೆ ರಜಾ ದಿನಗಳಲ್ಲಿಯೂ ಕೆಲಸದ ಒತ್ತಡದಿಂದ ಗ್ರಾಮ ಆಡಳಿತ ಅಧಿಕಾರಿಗಳು ಬಸವಳಿದಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಗೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಕೋಡಿ ಅಶೋಕ ಪೂಜಾರಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಜನರ ಸಮೀಪದ ಅಧಿಕಾರಿಗಳಾಗಿ ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಒಬ್ಬೊಬ್ಬರಿಗೆ ನಾಲ್ಕೈದು ಗ್ರಾಮಗಳನ್ನು ನೀಡುವುದರಿಂದ ಸಾರ್ವಜನಿಕರಿಗೆ ಸಮಸ್ಯೆಗಳುಂಟಾಗುತ್ತಿವೆ. ಇದನ್ನು ತಪ್ಪಿಸಲು ಅವರ ಬೇಡಿಕೆಗಳನ್ನು ತಲ್ಷಣ ಪೂರೈಸಬೇಕು ಎಂದು ಆಗ್ರಹಿಸಿದರು.
ನಿವೃತ್ತ ನೌಕರರ ಜಿಲ್ಲಾದ್ಯಕ್ಷರಾದ ಪ್ರಕಾಶ್ ಚಂದ್ರಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿ ಸಂಘದ ತಾಲೂಕು ಅದ್ಯಕ್ಷ ಶಿವರಾಯ, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಉಪಾಧ್ಯ, ಉಪಾದ್ಯಕ್ಷ ಆನಂದಕುಮಾರ ಒ. ಖಜಾಂಚಿ ಸೋಮಪ್ಪ ಹೆಬ್ಬಾಳ. ರಾಜ್ಯ ಪರಿಷತ್ ಸದಸ್ಯ ಆನಂದ್ ಮುಕ್ಕಣ್ಣ , ಮಹಿಳಾ ಕಾರ್ಯದರ್ಶಿ ಹೇಮಾ ಹಾಗೂ ಹಾಗೂ ಕುಂದಾಪುರ ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು. ಸರ್ಕಾರಿ ಕಂದಾಯ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ ಬಾಹ್ಯ ಬೆಂಬಲ ನೀಡಿದರು. ಪ್ರತಿಭಟನೆ ಸಂಜೆಯವರೆಗೂ ನಡೆಯಲಿದೆ.