ಅ.1ಕ್ಕೆ ನಿವೃತ್ತ ನೌಕರರಿಂದ ಧರಣಿ ಸತ್ಯಾಗ್ರಹ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೭: ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಅಡಿಯಲ್ಲಿ ಅಕ್ಟೋಬರ್ 1ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿವೃತ್ತ ನೌಕರರಿಂದ ಕಪ್ಪಪಟ್ಟಿ ಧರಿಸಿ ಒಂದು ದಿನದ ಧರಣಿ ಸತ್ಯಾಗ್ರಹ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ರಾಜ್ಯ ಮಹಾಪ್ರದಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ ತಿಳಿಸಿದರು. ‌ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಅ.1ರ ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.ನಾವುಗಳು  2022, ಜುಲೈ 1ರಿಂದ 2024, ಜುಲೈ 31ರ ಅವಧಿಯಲ್ಲಿ ನಿವೃತ್ತಿಯಾದ ನೌಕರರಾಗಿದ್ದು ನಮಗೆ 6 ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿಸಿಆರ್ ಜಿ ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಆರ್ಥಿಕ ನಷ್ಟವುಂಟಾಗಿ ಅನ್ಯಾಯವಾದ್ದು, ನಮ್ಮ ಅವಧಿಯಲ್ಲಿ ನಿವೃತ್ತರಾದವರಿಗೆ 7 ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಬೇಕೆಂದು ಆಗ್ರಹಿಸಿ ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲ ಕ್ಷೇತ್ರಗಳ ಶಾಸಕರ, ಎಲ್ಲಾ ಜಿಲ್ಲಾಧಿಕಾರಿಗಳ ಹಾಗೂ ಎಲ್ಲ ತಹಶೀಲ್ದಾರುಗಳ ಮುಖಾಂತರ ನೂರಾರು ನಿವೃತ್ತ ನೌಕರರು ಮನವಿಯನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಇದೇ ತಿಂಗಳ 18ಕ್ಕೆ ರಾಜ್ಯದ 12 ಸಾವಿರ ನಿವೃತ್ತ ನೌಕರರ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ವಿಶ್ರಾಂತ ನ್ಯಾಯಮೂರ್ತಿ ಸಂತೋಷ ಹೆಗಡೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯಾಧ್ಯಕ್ಷ ಸಿ. ಎಸ್. ಷಡಕ್ಷರಿ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್. ಭೈರಪ್ಪ ಇವರುಗಳ ಸಮ್ಮುಖದಲ್ಲಿ ನಮಗೆ ಆಗಿರುವ ಅನ್ಯಾಯದ ಕುರಿತು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತಿಗಳಿಗೆ ನೀಡಲಾಗಿದ್ದರೂ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.ಇದಲ್ಲದೇ 7ನೇ ವೇತನ ಆಯೋಗದಲ್ಲಿ ಆಗಿರುವ ಸುಮಾರು 12 ರಿಂದ 22 ಲಕ್ಷ ಆರ್ಥಿಕ ನಷ್ಟ ಉಂಟಾಗಿ ಅನ್ಯಾಯಕ್ಕೆ ಒಳಗಾಗಿರುವ ನಾವುಗಳು ಸಹ ರಾಜ್ಯದ ಕಾರ್ಯಾಂಗದಲ್ಲಿ 7,50,000 ನೌಕರರಲ್ಲಿ 1,50,000 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ 30 ರಿಂದ 40 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ನಮ್ಮನ್ನು ಕಡೆಗಣಿಸದಂತಾಗಿದೆ. ಈ ದಿಸೆಯಲ್ಲಿ ಸರಕಾರವಾಗಲಿ, ಮುಖ್ಯಮಂತ್ರಿಗಳಾಗಲಿ ನಮ್ಮ ಬೇಡಿಕೆ ಪರಿಗಣಿಸಿ ಈಡೇರಿಸುವತ್ತ ಗಮನ ಹರಿಸದೇ ನಿರ್ಲಕ್ಷಿಸಿದ್ದಾರೆ ಎಂದು ಅಳಲು ತೋಡಿಕೊಂಡರು.ಸುದ್ದಿಗೋಷ್ಟಿಯಲ್ಲಿ ರಾಜ್ಯ ಸಂಚಾಲಕರಾದ ಕೆ.ಹೆಚ್. ಮಂಜುನಾಥ್ ರೆಡ್ಡಿ, ಕೆ.ಶಿವಶಂಕರ್, ಡಿ.ಆನಂದಪ್ಪ, ಜಿಲ್ಲಾ ಸಂಚಾಲಕರಾದ ಎಂ.ವಿ.ಹೊರಕೇರಿ, ಎ.ಕೆ.ಭೂಮೇಶ್, ಎಸ್.ಎನ್.ಗಂಗಪ್ಪಳವರ್, ಎಸ್.ಖುಳ್ಳಪ್ಪ, ಹೆಚ್.ಗುರಪ್ಪ, ಅರ್ಜುನಪ್ಪ, ಡಿ.ತಿಪ್ಪೇಸ್ವಾಮಿ, ಜಿ.ಎಸ್. ನಾಗರಾಜ್ ಇತರರು ಇದ್ದರು.