ಬಸ್ಸಿನಲ್ಲಿ ವಿದ್ಯಾರ್ಥಿನಿ ಮೇಲೆ ಅನುಚಿತ ವರ್ತನೆ; ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿತನ ಬಂಧನ
ಸುಳ್ಯ:ಸುಳ್ಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯ ಮೇಲೆ ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭ ಅನುಚಿತ ವರ್ತನೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿತನಾದ ಅಬ್ದುಲ್ ನಿಯಾಝ್‌ನನ್ನು ಸುಳ್ಯ ಪೋಲಿಸರು ಬಂಧಿಸಿದ್ದಾರೆ.
ಕಾಸರಗೋಡಿನ ಅಬ್ದುಲ್ ನಿಯಾಝ್ (೨೨) ಆರೋಪಿತ ಯುವಕನ ಬಂಧನವಾಗಿದೆ. ಬೆಂಗಳೂರಿನಿಂದ ಸುಬ್ರಹ್ಮಣ್ಯ ಮೂಲಕ ಸುಳ್ಯಕ್ಕೆ ಬರುವ ಬಸ್ಸಿಗೆ ಸುಳ್ಯದಲ್ಲಿ ಡಿಪ್ಲೋಮ ಕಲಿಯುತ್ತಿರುವ ಸಕಲೇಶಪುರದ ವಿದ್ಯಾರ್ಥಿಯೋರ್ವರು ಹತ್ತಿದ್ದು, ಬಸ್ಸಿನಲ್ಲಿ ಯುವಕನೋರ್ವನ ಹತ್ತಿರ ಕುಳಿತ್ತಿದ್ದಾರೆ. ಈ ವೇಳೆ ಯುವಕ ಮೈಮುಟ್ಟಿ ಆಕೆಯೊಡನೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ವಿಚಾರದ ಬಗ್ಗೆ ಯುವತಿ ಬಸ್ ನಿರ್ವಾಹಕ ಹಾಗೂ ಬಸ್ಸಿನಲ್ಲಿದ್ದವರಿಗೆ ತಿಳಿಸಿದ್ದು, ಅವರು ಯುವಕನ ನಡೆಯನ್ನು ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡಿದ್ದರು. ವಿಚಾರದ ಬಗ್ಗೆ ಯುವತಿ ಸುಳ್ಯದ ಭಜರಂಗದಳದ ಯುವಕರಿಗೆ ಮಾಹಿತಿ ನೀಡಿದ್ದಾರೆ. ಆರೋಪಿತ ಯುವಕ ಸುಬ್ರಹ್ಮಣ್ಯದಲ್ಲಿ ಬಸ್ಸಿನಿಂದ ಇಳಿದು ಬೇರೊಂದು ಬಸ್ಸಿನಲ್ಲಿ ಸುಳ್ಯಕ್ಕೆ ಆಗಮಿಸಿದ್ದು, ಸುಳ್ಯದ ಪೈಚಾರ್ ಎಂಬಲ್ಲಿ ಇಳಿದಿದ್ದಾನೆ. ಈ ವೇಳೆ ಅಲ್ಲಿದ್ದ ಯುವಕರು ಆರೋಪಿತ ಯುವಕನ್ನು ಹಿಡಿದು ಕಾರಲ್ಲಿ ಕಿಡ್ನಾಪ್ ಮಾಡಿ ಸುಳ್ಯದ ಬಸ್ ನಿಲ್ದಾಣ ಸಮೀಪ ಕರೆತಂದು ತಂಡದಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಯುವಕ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಕಾಸರಗೋಡಿನ ಮುಳ್ಳೇರಿಯಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಇದೀಗ ಯುವತಿಯ ಮೈ ಕೈಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಈತನನ್ನು ಪೋಲಿಸ್ ಅಧಿಕಾರಿಗಳು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.