ಸಿದ್ರಾಮಯ್ಯ ಮತ್ತು ವ್ಯಾಲ್ಯೂವ್ ಲೇಔಟ್‍ನಲ್ಲಿ ಅಕ್ರಮ ನಿವೇಶನ ಮಾರಾಟ ಆರೋಪಬಾಬು ವಾಲಿ ವಿರುದ್ಧ ಕ್ರಮ ಕೈಗೊಳ್ಳಿ : ಅರವಿಂದಕುಮಾರ ಅರಳಿ
ಬೀದರ: ಬೀದರ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಸಾಕಷ್ಟು ಹಗರಣಗಳು ನಡೆಯುತ್ತಲಿದ್ದು, ಇತ್ತಿಚಿಗೆ ಬೀದರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಾದ ಹಗರಣ ಸದ್ದು ಮಾಡಿದೆ. ಹೀಗೆಂದು ಹೇಳುತ್ತಾರೆ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು 2022-23ನೇ ಸಾಲಿನಲ್ಲಿ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಚಿದ್ರಿ ರಸ್ತೆಯಲ್ಲಿರುವ ಸಿದ್ರಾಮಯ್ಯ ಬಡಾವಣೆ ಮತ್ತು ನೌಬಾದನಲ್ಲಿರುವ ವ್ಯಾಲ್ಯೂವ್ ಲೇಔಟ್‍ಗಳಲ್ಲಿ ತಲಾ ಎಂಟು ನಿವೇಶನಗಳು ಆಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಗುನ್ನಳ್ಳಿ ಗ್ರಾಮದ ಸರ್ವೆ ನಂ. 22/2, 21/1 ರಲ್ಲಿರುವ 26 ಎಕರೆ ನಿವೇಶನ ಹಂಚಿಕೆಯಲ್ಲಿ ಗೋಲ್‍ಮಾಲ್ ನಡೆದಿದ್ದು, ಈ ಎಲ್ಲವುಗಳ ಬಗ್ಗೆ ತನಿಖೆ ನಡೆಸಲು ವಿಧಾನ ಪರಿಷತ್ ಕಲಾಪದಲ್ಲಿ ನಾನು ಸರ್ಕಾರದ ಗಮನಕ್ಕೆ ತಂದಿರುತ್ತೇನೆ. ಅದಕ್ಕೆ ಮಂತ್ರಿಗಳು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ 19-08-2023ರಲ್ಲಿ ಒಂದು ತನಿಖಾ ತಂಡ ಹಾಗೂ ನಗರ ಹಾಗೂ ಗ್ರಾಮೀಣ ಯೋಜನಾ ಇಲಾಖೆ ಧಾರವಾಡ ಇವರ ಒಂದು ತನಿಖಾ ರಚಿಸಿ ತನಿಖೆ ಮಾಡಲು ಸರ್ಕಾರ ಆದೇಶ ನೀಡಿತ್ತು. ಅದರನ್ವಯ ಸರ್ಕಾರವು ಕಾನೂನಿನ ಮೊರೆ ಹೋಗಿ ಈ ಹಗರಣದ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಬಳಿಕ ಹಗರಣದಲ್ಲಿ ಶಾಮೀಲಾಗಿದ್ದರೆ ಹಿಂದಿನ ಬುಡಾ ಅಧ್ಯಕ್ಷರಾದ ಬಾಬು ವಾಲಿಯವರ ವಿರುದ್ಧ ಭಾರತೀಯ ದಂಡಸಂಹಿತೆ 409 ರನ್ವಯ ಜಾಮೀನುರಹಿತ ಕೇಸ್ ದಾಖಲಿಸಲು ಹಾಗೂ ಇದರಲ್ಲಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹಾನಿಯಾದರೆ ಅವರಿಂದ ಹಣ ವಸೂಲಿ ಮಾಡಲು ಹಾಲಿ ಬುಡಾ ಆಯುಕ್ತರಿಗೆ ನಿರ್ದೇಶನ ನೀಡಿತ್ತು. ಆದರೆ ಹಾಲಿ ಬುಡಾ ಆಯುಕ್ತರಾದ ಶ್ರೀಕಾಂತ ಅವರು ಬಿಜೆಪಿ ರಾಜಕೀಯ ಪ್ರಭಾವಿಯೊಬ್ಬರ ಸಂಬಂಧಿಯಾಗಿರುವುದರಿಂದ ಈ ವಿಚಾರವಾಗಿ ಕ್ರಮ ಕೈಗೊಳ್ಳಲು ಮೀನಾಮೆಷ ಎಣಿಸುತ್ತಿದ್ದಾರೆಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅರಳಿ ಹೇಳಿದರು.
ಶಾಹಿನ್ ಕಾಲೇಜು ಎದುರುಗಡೆ ಇರುವ ಕೆರೆ ಪ್ರದೇಶದ ಅಭಿವೃದ್ಧಿಗೆ ಎರಡು ಕೋಟಿ ಹಾಗೂ ಪಾಪನಾಶ ಕೆರೆ ಮೇಲಿನ ಫುಟ್‍ಪಾತ್ ಅಭಿವೃದ್ಧಿಗೆ ಎರಡು ಕೋಟಿಯಂತೆ ಹಣ ಬಿಡುಗಡೆಯಾಗಿದ್ದು, ಇದರಲ್ಲಿ ಆಗಿನ ಅಧ್ಯಕ್ಷರಾದ ಬಾಬು ವಾಲಿಯವರದ್ದೇ ಕೈವಾಡವಿರುತ್ತದೆ. ನಾನು ಹಾಲಿ ಪೌರಾಡಳಿತ ಸಚಿವ ರಹಿಂಖಾನ್ ಮತ್ತು ಮಾಜಿ ಎಂಎಲ್‍ಸಿ ರಘುನಾಥರಾವ ಮಲ್ಕಾಪುರೆ ಕೇವಲ ಸಭೆಗಳಿಗೆ ಮಾತ್ರ ಸೀಮಿತರಾಗಿರುತ್ತಿದ್ದೇವು. ಆದರೆ ಈ ಎಲ್ಲಾ ಆಕ್ರಮಗಳಿಗೆ ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಹಾಗೂ ಆಗಿನ ಬುಡಾ ಆಯುಕ್ತ ಅಭಯಕುಮಾರ ಪಾಟೀಲ ಅವರೇ ಪ್ರಮಾದ ಎಸಗಿದ್ದಾರೆ. ಇದರಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಬುಡಾದಲ್ಲಾದ ಆಕ್ರಮ ವಿಚಾರವಾಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಗಮನಕ್ಕೂ ತರಲಾಗಿದ್ದು, ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಇದರ ಬಗ್ಗೆ ತುರ್ತು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ. ಅದು ಸಹ ಸಾಧ್ಯವಾಗದಿದ್ದರೆ ಹೈಕೋರ್ಟ್ ಮೊರೆ ಹೋಗಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಗೌತಮ ವಾಗರಾಜ ಉಪಸ್ಥಿತರಿದ್ದರು.