ಬೆಳೆಗೆ ರೈತರು ಬೆಲೆ ಕಟ್ಟಬೇಕು, ಮಾರಾಟಗಾರರಲ್ಲ
ವಿಜಯಪುರ,ಜು.04:ಕೃಷಿ ವಿಜ್ಞಾನಿಗಳು ಪ್ರಯೋಗಾಲಯಗಳಿಗೆ ಸೀಮಿತರಾಗದೇ ತಾವು ಕೈಗೊಂಡ ಸಂಶೋಧನೆಗಳ ಫಲಿತಾಂಶಗಳನ್ನು ರೈತರ ಮನೆಯ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಬಕಡ್ಡಿ ಗ್ರಾಮದಲ್ಲಿ ವಿಜಯಪುರ ಕೃಷಿ ವಿಜ್ಞಾನ ಕೇಂದ್ರ ಹಾಗೂ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಗೋವಿನಜೋಳ ಅಭಿವೃದ್ಧಿ ಯೋಜನೆ ಇವರ ಸಹಯೋಗದಲ್ಲಿ “ಕೃಷಿ ವಿಜ್ಞಾನಿಗಳ ನಡೆ ರೈತರ ಕಡೆ” ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ‘ಗೋವಿನಜೋಳ ಸಮಗ್ರ ನಿರ್ವಹಣೆ ಕುರಿತು ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯವು ಒಂದು ಹೊಸ ಯೋಜನೆಯನ್ನು ಹಮ್ಮಿಕೊಂಡು ಗ್ರಾಮಕ್ಕೆ ವಿಜ್ಞಾನಿಗಳನ್ನು ಕರೆಸಿ, ಪರಸ್ಪರ ಚರ್ಚಿಸಿ, ಕೃಷಿಯಲ್ಲಿ ಪರಿಹಾರೋಪಾಯಗಳನ್ನು ಕಂಡುಹಿಡಿಯುವ ಪ್ರಯತ್ನ ಇದಾಗಿದೆ ಎಂದರು. ಕೃಷಿ ವಿಶ್ವವಿದ್ಯಾಲಯವು ಮೂರು ಅಂಗಗಳನ್ನು ಹೊಂದಿದ್ದು, ಅದರಂತೆ ಬೋಧನೆಯಲ್ಲಿ ಕೃಷಿ ಪದವೀಧರರನ್ನು ತಯಾರು ಮಾಡುವ ಕಾರ್ಯ, ಸಂಶೋಧನೆ ಮೂಲಕ ವಿವಿಧ ತಳಿಗಳ ಅಭಿವೃದ್ಧಿ, ಬೇಸಾಯ ಪದ್ಧತಿ ಕೆಲಸ ಮತ್ತು ವಿಸ್ತರಣೆ ಮೂಲಕ ರೈತರಿಗೆ ನೇರವಾಗುವ ಕಾರ್ಯವನ್ನು ಮಾಡುತ್ತಿದೆ ಎಂದರು.
ರೈತರ ಮಕ್ಕಳಿಗೆ ಕೃಷಿ ಪದವಿ ಪ್ರವೇಶಕ್ಕೆ ಶೇ. 50 ರಷ್ಟು ಸೀಟುಗಳನ್ನು ಕಾಯ್ದಿರಿಸಿದ್ದು, ತಮ್ಮ ಮಕ್ಕಳಿಗೆ ಕೃಷಿ ಶಿಕ್ಷಣ ಕೊಡಿಸಬೇಕೆಂದರು. ಕೃಷಿ ವಿಜ್ಞಾನ ಕೇಂದ್ರವು ಕುಬಕಡ್ಡಿ ಗ್ರಾಮವನ್ನು ದತ್ತು ಗ್ರಾಮವಾಗಿ ಸ್ವೀಕರಿಸಿ ಎಲ್ಲ ತಾಂತ್ರಿಕತೆಗಳನ್ನು ಇಲ್ಲಿ ಹಮ್ಮಿಕೊಂಡಿದ್ದು, ಉತ್ತಮ ಬೆಳವಣಿಗೆಯಾಗಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ರೈತ ಉತ್ಪಾದಕ ಸಂಸ್ಥೆ ಸದಸ್ಯರಿಗೆ ಮತ್ತು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ರೈತರು ಬೀಜೋತ್ಪಾದನೆ ಚಟುವಟಿಕೆ ಹಮ್ಮಿಕೊಂಡು ತಮ್ಮ ಆದಾಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಶೋಧನಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ ಮಾತನಾಡಿ, ರೈತರು ಬೇಸಾಯದಲ್ಲಿ ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಭೂಮಿಯನ್ನು ಹದಗೊಳಿಸಿ ತಯಾರಿಸಿಕೊಳ್ಳಬೇಕು. ಹಂಗಾಮಿಗನುಸಾರವಾಗಿ ಬೆಳೆ ಆಯ್ಕೆ, ತಳಿ ಆಯ್ಕೆ, ಬೀಜ ಆಯ್ಕೆ ಬೀಜೋಪಚಾರ ಇತ್ಯಾದಿ ಕಾರ್ಯಗಳನ್ನು ಹಮ್ಮಿಕೊಂಡಲ್ಲಿ ಶೇ. 70 ರಷ್ಟು ಕೃಷಿ ಕಾರ್ಯ ಕೈಗೊಂಡಂತಾಗುತ್ತದೆ ಎಂದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಮಾತನಾಡಿ, ರೈತರು ಜಿಲ್ಲೆಯಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ತೊಗರಿ ಬೆಳೆದಿದ್ದು, ಅವರು ಅಗಲುಸಾಲು ಪದ್ಧತಿಯಲ್ಲಿ ಬಿತ್ತಬೇಕು. ಈಗಾಗಲೇ ಬಿತ್ತನೆ ಕೈಗೊಂಡ ರೈತರು ಪೂಟಿಗೊಂದರಂತೆ ಬಿಟ್ಟು ಉಳಿದ ಸಸಿಗಳನ್ನು ಕೀಳಬೇಕು. 40 ದಿನಗಳಾದ ನಂತರ ಕುಡಿ ಚಿವುಟಬೇಕು. ತೇವಾಂಶ ಕಾಯ್ದುಕೊಳ್ಳಲು 2 ರಿಂದ 3 ಸಾರಿ ಎಡೆ ಹೊಡೆದು ಬೋದು ಏರಿಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ನಿರ್ದೇಶಕ ಡಾ. ಎಸ್. ಎಸ್. ಅಂಗಡಿ ಮಾತನಾಡಿ, ರೈತರು ವಿವಿಧ ತಾಂತ್ರಿಕ ತೆಗಳನ್ನು ಅಳವಡಿಸಿಕೊಳ್ಳಬೇಕು. ಒಂದೇ ಬೆಳೆ ಬೆಳೆಯದೇ ಬೆಳೆ ಪರಿವರ್ತನೆ ಮಾಡಬೇಕು. ಕೃಷಿ ವಿಶ್ವವಿದ್ಯಾಲಯದ ತಜ್ಞರೊಂದಿಗೆ ನಿರಂತರ ಸಂಪರ್ಕವಿಟ್ಟಿಕೊಂಡು ತಮ್ಮ ಸಮಸ್ಯೆಗೆ ಪರಿಹಾರ ಕಂಡಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಧಾರವಾಡ ಕೃಷಿ ವಿವಿ ಗೋವಿನ ಜೋಳ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಬೀಜ, ಸಸ್ಯ ಸಂರಕ್ಷಣೆ ಔಷಧಿ ವಿತರಿಸಲಾಯಿತು. ನಂತರ ರೈತರೊಂದಿಗೆ ನಡೆದ ಸಂವಾದಲ್ಲಿ ವಿಜ್ಞಾನಿಗಳಾದ ಡಾ. ಎಮ್. ಆರ್. ಕಾಚಾಪುರ, ಡಾ. ಪ್ರಸನ್ನ ಪಿ. ಎಮ್., ಡಾ. ಕಿರಣಸಾಗರ ಡಿ.ಸಿ., ಡಾ. ಶಿವರಾಜ ಕಾಂಬಳೆ, ಡಾ. ವಿಜಯಲಕ್ಷ್ಮೀ ಮುಂದಿನಮನಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾಧಿಕಾರಿ ಡಾ. ಎ. ಭೀಮಪ್ಪ, ಸಹ ಸಂಶೋಧನಾ ನಿರ್ದೇಶಕ ಡಾ. ಎ. ಎಸ್. ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ, ಡಾ. ಎಮ್. ಪಿ. ಪೋತದಾರ, ಪ್ರಧಾನ ಸಂಶೋಧಕ ಡಾ. ಎಸ್. ಆರ್. ಸಲಕೀನಕೊಪ್ಪ, ಹಿರಿಯ ವಿಜ್ಞಾನಿಗಳಾದ ಡಾ. ಎಸ್. ಎಮ್. ವಸ್ತ್ರದ, ಡಾ. ಶಿವಶಂಕರಮೂರ್ತಿ, ಪ್ರಗತಿಪರ ರೈತರಾದ ಗಿರೀಶ ತೆಲಗಿ, ಗುರನಗೌಡ ಬಿರಾದಾರ, ವಿ. ಜಿ. ಕುಲಕರ್ಣಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು.