ಅಭಿವೃದ್ಧಿಗೆ ಸಂಶೋಧನೆ ಅಗತ್ಯ: ಜಯಲಕ್ಷ್ಮಿ
ವಿಜಯಪುರ,ಜು.4:ಸಂಶೋಧನೆ ಎನ್ನುವುದು ನಿರ್ದಿಷ್ಟ ವಿಷಯವನ್ನು ಸಂಶೋಧಿಸುವ ವ್ಯವಸ್ಥಿತ ಮತ್ತು ವೈಜ್ಞಾನಿಕ ವಿಧಾನವಾಗಿದ್ದು, ಅಭಿವೃದ್ಧಿಗೆ ಸಂಶೋಧನೆ ಅಗತ್ಯ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಸಚಿವೆ ಜಯಲಕ್ಷ್ಮೀ ರಾಯ್ಕೋಡ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಪ.ಜಾ/ಪ.ಪಂ ನಿರ್ದೇಶನಾಲಯದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 11 ದಿನಗಳ ಸಂಶೋಧನಾ ವೈಜ್ಞಾನಿಕತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆಗಳ ಫಲ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಬೇಕು. ಸಂಶೋಧನೆಯ ಆಳಕ್ಕೆ ಇಳಿದಾಗ ಮಾತ್ರ ನಿಜವಾದ ಸಂಶೋಧನೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡಲು ಸಾಧ್ಯವಾಗುತ್ತದೆ. ಪ್ರೌಢ ಪ್ರಬಂಧಗಳು ಸರ್ಕಾರಕ್ಕೆ ಹಾಗೂ ನೀತಿರೂಪಕರಿಗೆ ಮಾರ್ಗದರ್ಶನ ನೀಡಿ ಮೈಲಿಗಲ್ಲಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯದ ಸಂಶೋಧನೆಗಳು ಮಹಿಳಾ ಸಮುದಾಯದ ಬದುಕನ್ನು ಸುಗಮಗೊಳಿಸಿ ಮಹಿಳಾ ಸಬಲೀಕರಣಕ್ಕೆ ದಾರಿ ಮಾಡಿಕೊಡಬೇಕು. ಸಂಶೋಧನಾರ್ಥಿಗಳಿಗೆ ಸಂಶೋಧನೆ ಮಾಡುವುದು ಒಂದು ಸುವರ್ಣ ಅವಕಾಶ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಮಾರಂಭದಲ್ಲಿ ಪ್ರೊ. ರೇಣುಕಾ ಮೇಟಿ, ಪ್ರೊ. ರಾಜು ಬಾಗಲಕೋಟ, ಪ್ರೊ. ವಿಷ್ಣು ಸಿಂಧೆ ಹಾಗೂ ವಿವಿಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ವಿವಿಯ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಲಕ್ಷ್ಮೀದೇವಿ ವಾಯ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಡಾ. ಸರೋಜಾ ಸಂತಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಭಾಗ್ಯಶ್ರೀ ದೊಡಮನಿ ನಿರೂಪಿಸಿದರು. ಡಾ. ಭಾರತಿ ಗಾಣಿಗೇರ ವಂದಿಸಿದರು.