ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
ವಿಜಯಪುರ,ಜು.4: ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷÀ ಭೀಮಶೆಟ್ಟಿ ಯಂಪಳ್ಳಿ ಅವರು ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ , ಅಲ್ಪಸಂಖ್ಯಾತ, ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಘದಲ್ಲಿ ಕಳೆದ 15 ರಿಂದ 20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ವಸತಿ ನಿಲಯ-ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಡಿ ಗ್ರೂಪ್ ಅಟೆಂಡರ್, ಕಂಪ್ಯೂಟರ್ ಆಪರೇಟರ್‍ಗಳು ಯಾವುದೇ ಭದ್ರತೆ ಇಲ್ಲದೆ ಕೆಲಸ ಮಾಡುತ್ತಾ ನಿರಂತರವಾಗಿ ವಾರ್ಡನ್ ಅವರು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹೊರಗುತ್ತಿಗೆ ಸಿಬ್ಬಂದಿಗಳನ್ನು ಶೋಷಣೆ ಮಾಡುತ್ತಿದ್ದು, ತಕ್ಷಣ ಎಲ್ಲ ಶೋಷಣೆಗಳನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಹುಚ್ಚಪ್ಪ ಎಚ್.ಚಲವಾದಿ ಮಾತನಾಡಿ, ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು. ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು. 10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಡಿಯಲ್ಲಿ ಎಲ್ಲರನ್ನೂ ತರಬೇಕು. ಕಾರ್ಮಿಕ ಇಲಾಖೆಯ ಕನಿಷ್ಟ ವೇತನ ಪರಿಷ್ಕರಣ ಸಮಿತಿ ಸಭೆ ಸೇರಿ ತೀರ್ಮಾನ ಮಾಡಿ ಕನಿಷ್ಟ ವೇತನ 31ಸಾವಿರ ಕೊಡಬೇಕು. ಕಾರ್ಮಿಕ ಇಲಾಖೆಯ ಕಾನೂನು ಪ್ರಕಾರ ವಾರದ ರಜೆ ಕೊಡಬೇಕು. ಕೆಲಸದ ಸಮಯ ನಿಗಧಿ ಆಗಬೇಕು. ಗುತ್ತಿಗೆದಾರರು ಸಂಬಳದ ಚೀಟಿ , ನೇಮಕಾತಿ ಆದೇಶ ಪತ್ರ , ಐ.ಡಿ.ಕಾರ್ಡ್ , ಸರ್ವಿಸ್ ಸರ್ಟಿಫಿಕೇಟ್, ಇಎಸ್‍ಐ ಮತ್ತು ಪಿ.ಎಫ್ ಹಣ ತುಂಬಿದ ರಶೀದಿ ಕೊಡಬೇಕು. ಪ್ರತಿ ತಿಂಗಳು 5 ನೇ ತಾರೀಖು ಸಂಬಳ ಕೊಡಬೇಕು . ಬಾಕಿ ಇರುವ ಸಂಬಳವನ್ನು ತಕ್ಷಣ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ 10 ಲಕ್ಷ ಪರಿಹಾರ ಕೊಡಬೇಕು. ಖಾಯಂ ನೌಕರರ ಸ್ಥಳಗಳಿಗೆ ಕಾಯಂ ನೌಕರರನ್ನು ವರ್ಗಾವಣೆ ಮಾಡಬೇಕು. ಬಿಸಿಎಂ ಇಲಾಖೆಯಲ್ಲಿ ಕೆಲಸ ಕಳೆದುಕೊಂಡಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮತ್ತೆ ಮರು ನೇಮಕ ಮಾಡಿಕೊಳ್ಳಬೇಕು. ಅಡುಗೆ ಕೋಣೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಸಲಕರಣೆಗಳನ್ನು ಕೊಡಬೇಕು. ಅಪಘಾತದ ಸಮಯದಲ್ಲಿ ಇಲಾಖೆ ಪರಿಹಾರ ನೀಡಬೇಕು. ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳ ಸಂಖ್ಯೆ ಕಡಿತ ಮಾಡಿರುವ ಆದೇಶ ರದ್ದಾಗಬೇಕು. 50 ವಿದ್ಯಾರ್ಥಿಗಳಿಗೆ 3 ಜನ ಸಿಬ್ಬಂದಿಯಂತೆ ಹಿಂದಿನ ಪದ್ಧತಿ ಮುಂದುವರಿಸಬೇಕು. ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್‍ಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಸಂಖ್ಯೆ ಹೆಚ್ಚು ಮಾಡಬೇಕು. ಬಿಸಿಎಂ ಬಾಲಕರ ಹಾಸ್ಟೆಲ್‍ಗಳಿಗೆ ಹಿಂದಿನಂತೆ ರಾತ್ರಿ ಕಾವಲುಗಾರರನ್ನು ನೇಮಕ ಮಾಡಬೇಕು. ಅಡುಗೆಯವರು , ಅಡುಗೆ ಸಹಾಯಕರು , ಸ್ವಚ್ಛತಾಗಾರರಿಂದ ಶೌಚಾಲಯ ಸ್ವಚ್ಛ ಮಾಡಿಸಬಾರದು. ಕೆಲವು ವಸತಿ ನಿಲಯ ಮತ್ತು ಹಾಸ್ಟೆಲ್‍ಗಳಿಗೆ ಚಪಾತಿ , ರೊಟ್ಟಿ ಮಾಡುವ ಯಂತ್ರಗಳನ್ನು ಕೊಟ್ಟಿದ್ದು ಕೆಲವು ಕಡೆ ಯಂತ್ರಗಳು ಕೆಟ್ಟು ಹೋಗಿರುತ್ತವೆ . ಮತ್ತೆ ಚಪಾತಿ ಮಾಡುವ ಸಮಯದಲ್ಲಿ ಕರೆಂಟ್ ಇಲ್ಲದೆ ಹೋದರೆ ಆ ಸಮಯದಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳು ಕೈಯಲ್ಲಿ ಮಾಡಬೇಕಾಗುತ್ತದೆ. ಹಾಗಾಗಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು. ವಸತಿ ನಿಲಯ ಮತ್ತು ಹಾಸ್ಟೆಲ್‍ಗಳಿಗೆ ವಾರ್ಡನ್ ಅವರು ಮಕ್ಕಳ ಅಡುಗೆಗೆ ಅಗತ್ಯವಾಗಿ ಬೇಕಾದ ಆಹಾರ ಸಾಮಾಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ತಂದು ಕೊಡಬೇಕು. ಹೊಸದಾಗಿ ಪ್ರಾರಂಭ ಮಾಡುವ ವಸತಿ ನಿಲಯ ಮತ್ತು ಹಾಸ್ಟೆಲ್‍ಗಳಿಗೆ ಮೀಸಲಾತಿ ಜಾರಿಮಾಡಬೇಕು. ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಸಂಘದ ಪದಾಧಿಕಾರಿಗಳೊಂದಿಗೆ ಜಂಟಿ ಸಭೆ ಕರೆಯುವಂತೆ ಬೇಡಿಕೆಗಳನ್ನು ಮುಂದಿಟ್ಟು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ರಾಜೇಶ ದೇಶಪಾಂಡೆ, ಜಿಲ್ಲಾ ಉಪಾಧ್ಯಕ್ಷ ಕಾಶೀಮ ಆಲದಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಮಸಳಿ, ಜಿಲ್ಲಾ ಸಹ ಕಾರ್ಯದರ್ಶಿ ಯಮನಪ್ಪ ಬಜಂತ್ರಿ, ಜಿಲ್ಲಾ ಖಜಾಂಚಿ ರಾಮಚಂದ್ರ ಕೋಳಿ, ಬೇಬಿ ಹೊಸಮನಿ, ಮೀನಾಕ್ಷಿ ತಳವಾರ, ಶಾಂತಾ ಪಾಟೀಲ, ರಾಮವ್ವ ಬಜಂತ್ರಿ, ಲಕ್ಷ್ಮೀ ಕಣಿಮನಿ, ಸುಮಿತ್ರಾ ತಳವಾರ, ರೇಣುಕಾ ಮಾಡಗಿ, ಅನಸೂಯಾ ಬಡಿಗೇರ, ಹೀನಾ ಪಡೇಕನೂರ, ಗೌರಕ್ಕ ಬೆಳ್ಳೂರ, ದಾನಮ್ಮ ಹೂಗಾರ, ನೂರಜಾನ ಯಲಗಾರ, ಮಲ್ಲಿಕಾರ್ಜುನ ಚಲವಾದಿ, ರಜನಿ ಬನಸೋಡೆ, ವೈಶಾಲಿ ಸಮಗೊಂಡ, ನಿತೀಶ ತಳಕೇರಿ, ಮಲಕಾರಿ ಮೋರೆ, ಸಂಗಮ್ಮ ಆಲಮೇಲ ಇತರರು ಉಪಸ್ಥಿತರಿದ್ದರು.