ಪರಿಸರ ಪ್ರೇಮಿ ರಿಯಾಜಪಾಶಾ ಕೊಳ್ಳೂರಗೆ ಜೀವ ವೈವಿಧ್ಯ ಪ್ರಶಸ್ತಿ ಪ್ರದಾನ
ಔರಾದ್:ಜು.4: ರಾಜ್ಯ ಜೀವ ವೈವಿಧ್ಯ ಮಂಡಳಿ ವತಿಯಿಂದ ನೀಡುವ 2023ನೇ ಸಾಲಿನ ಜೀವ ವೈವಿಧ್ಯ ಪ್ರಶಸ್ತಿಗೆ ತಾಲ್ಲೂಕಿನ ಪರಿಸರ ಪ್ರೇಮಿ ರಿಯಾಜಪಾಶಾ ಕೊಳ್ಳೂರ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ರಿಯಾಜಪಾಶಾ ಕೊಳ್ಳೂರ ಅವರ ಜೀವವೈವಿಧ್ಯತೆಯ ಸಂರಕ್ಷಣೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜೀವವೈವಿಧ್ಯ ಮಂಡಳಿ ವತಿಯಿಂದ 2023ನೇ ಸಾಲಿನ ಜೀವವೈವಿಧ್ಯ ಪ್ರಶಸ್ತಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಸುಮಾರು ವರ್ಷಗಳಿಂದ ಪರಿಸರ ಸ್ನೇಹಿಯಾಗಿ, ಬೇಸಿಗೆ ಕಾಲದಲ್ಲಿ ಪಕ್ಷಗಳಿಗೆ ನೀರುಣಿಸುವ ಮೂಲಕ, ಹಾಗೂ ಸಾಮಾಜಿಕ ಕಾರ್ಯಕರ್ತನಾಗಿ ತಾಲ್ಲೂಕಿನಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿರುವ ರಿಯಾಜಪಾಶಾ ಅವರು ಸದಾ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವರು ಅವರ ಕಾರ್ಯ ಪ್ರೇರಣಾತ್ಮಕವಾಗಿದೆ. ಜೀವ ವೈವಿಧ್ಯ ಮಂಡಳಿ ಇವರ ಸೇವೆಯನ್ನು ಗುರುತಿಸಿ ಜೀವ ವೈವಿಧ್ಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ತಾಲ್ಲೂಕಿಗೆ ಸಂತಸದ ಸಂಗತಿ. ರಿಯಾಜಪಾಶಾ ಅವರಿಗೆ ಪ್ರಶಸ್ತಿ ಲಭಿಸಿದಕ್ಕಾಗಿ ಅನೇಕ ಸಂಘ ಸಂಸ್ಥೆಗಳು ಹಾಗೂ ಸ್ನೇಹ ಬಳಗ ಹರ್ಷ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸಿರ ಅಹ್ಮದ್, ಅರಣ್ಯ, ಜೀವಿಪರಿಸ್ಥಿತಿ ಹಾಗೂ ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಬ್ರೀಜೇಶ್ ಕುಮಾರ್, ಕರ್ನಾಟಕ ಜೀವವೈವಿಧ್ಯ ಮಂಡಳಿಯ ಜಗತ್ ರಾಮ್ ಸೇರಿದಂತೆ ಇತರರು ಇದ್ದರು.