ಕರ್ನಾಟಕ ಕ್ರಿಶ್ಚಿಯನ್ ಕಮ್ಯುನಿಟಿ ಡೆವಲಪ್‍ಮೆಂಟ್ ಕಾರ್ಪೊರೇಶನ್‍ಗೆ 200 ಕೋಟಿ ಮೀಸಲು: ಐವಾನ್ ಡಿಸೋಜಾ
ಬೀದರ:ಜು.4: ಕರ್ನಾಟಕ ಕ್ರಿಶ್ಚಿಯನ್ ಕಮ್ಯುನಿಟಿ ಡೆವಲಪಮೆಂಟ್ ಕಾರ್ಪೋರೇಶನ್‍ಗೆ ರಾಜ್ಯ ಸರ್ಕಾರ 200 ಕೋಟಿ ಅನುದಾನ ಮೀಸಲಿಟ್ಟಿದೆ. ಈಗಾಗಲೇ 80 ಕೋಟಿ ಅನುದಾನ ಬಿಡುಗಡೆ ಕೂಡಾ ಮಾಡಲಾಗಿದೆ. ಶೀಘ್ರವೇ ಕಾರ್ಪೋರೇಶನ್‍ಗೆ ಅಧ್ಯಕ್ಷ ಮತ್ತು ನಿರ್ದೇಶಕರ ನೇಮಕವಾದ ಬಳಿಕ ಅನುದಾನ ಖರ್ಚು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮುದಾಯ ಮತ್ತು ಸ್ಮಶಾನ ಭೂಮಿಗಾಗಿ 20 ಕೋಟಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ಶ್ರಮಶಕ್ತಿ, ಶಿಕ್ಷಣ, ಗಂಗಾ ಕಲ್ಯಾಣ, ತರಬೇತಿ ಮುಂತಾದವುಗಳಿಗೆ ಅನುದಾನ ಬಳಸಲಾಗುವುದು. ಈಗಾಗಲೇ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಎಂಬಿಎ ಮತ್ತು ಎಂಸಿಎ ಓದುವ ಮಕ್ಕಳಿಗೆ ಐದು ವರ್ಷಗಳ ಕಾಲ ಶುಲ್ಕ ಭರಿಸಲು ಕ್ರಮ ತೆಗೆದುಕೊಂಡಿದ್ದೇವೆ. ಇನ್ನು ಮುಂದೆ ನನ್ನಿಂದ ಓದಲು ಆಗುತ್ತಿಲ್ಲ ಎಂದು ಯಾರಾದರೂ ವಿದ್ಯಾರ್ಥಿಗಳು ನನ್ನ ಮುಂದೆ ನೋವು ತೋಡಿಕೊಂಡರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜಕೀಯ ವಿಚಾರವಾಗಿ ಮಾತನಾಡಿರುವ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಇತರೆ ಅಭಿವೃದ್ಧಿ ಹಣವು ಗ್ಯಾರಂಟಿಗೆ ಬಳಸಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸಲಿ ನೋಡೋಣ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸುಳ್ಳು ನೆಪ ಹೇಳಿ ಜನರಿಗೆ ದಾರಿ ತಪ್ಪಿಸಲು ಹೊರಟಿರುವ ಇವರಿಗೆ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ಈ ಭಾಗದಲ್ಲಿ ಸೋತು ಸುಣ್ಣವಾಗಿರುವ ಇವರಿಗೆ ಮಾತನಾಡಲು ವಿಷಯಗಳೇ ಇಲ್ಲ. ಹೀಗಾಗಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಹಿಸದೆ ಹೊಟ್ಟೆಕಿಚ್ಚು ಪಡುತ್ತಿರುವರು. ನೀಟ್ ವಿಷಯವಾಗಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತಿದೆ. ಇಡೀ ದೇಶದಾದ್ಯಂತ ಯುವಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಬಿಜೆಪಿಗರಿಗೆ ಈ ಲೋಕಸಭೆ ಚುನಾವಣೆಯಲ್ಲಿ ದೇಶದ ಜನ ತಕ್ಕ ಉತ್ತರ ನೀಡಿದ್ದಾರೆ ಎಂದರು
ನೀಟ್ ಪರೀಕ್ಷೆ ಬಗ್ಗೆ ಈ ತಿಂಗಳ 15 ರಿಂದ ನಡೆಯಲಿರುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಅದಕ್ಕೆ ಗೇಟ್‍ಪಾಸ್ ನೀಡಲಾಗುವುದು. ಹಿಂದೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸಿಇಟಿ ಪರೀಕ್ಷೆ ಜಾರಿಗೆ ತಂದು ಇಲ್ಲಿಯ ರಾಜ್ಯದ ವಿದ್ಯಾರ್ಥಿಗಳಿಗೆ ನ್ಯಾಯಯುತ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದರು. ಅದನ್ನೇ ಪುನರ್ ಪ್ರಾರಂಭಿಸಲು ನಮ್ಮ ಸರ್ಕಾರ ಚರ್ಚಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಜಾನ್ ವೆಸ್ಲಿ, ಮಾಜಿ ಬುಡಾ ಅಧ್ಯಕ್ಷ ಸಂಜಯ್ ಜಾಗಿರದಾರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ವನಿಲಾ ಸೂರ್ಯವಂಶಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾ ಕಾಂಗ್ರೇಸ್ ವಕ್ತಾರ ಜಾರ್ಜ್ ಫರ್ನಾಂಡಿಸ್, ಪಕ್ಷದ ಪ್ರಮುಖರಾದ ಎಸ್.ಪಿ. ರಾಜಶೇಖರ, ಮಹೇಶ ಹಿರೇಮನಿ, ಯೇಸುದಾಸ ಆಣದೂರೆ, ಅರ್ಜುನ ಕನಕ, ಫಿಲಿಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.