ಕಾಮಗಾರಿ ಅತಂತ್ರ
ಲಕ್ಷ್ಮೇಶ್ವರ,ಜು.4:ತಾಲೂಕಿನ ದೊಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳಟ್ಟಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಕೈಗೊಂಡಿರುವ ಶಾಲಾ ಕೊಠಡಿಯೂಂದು ಕಳೆದ ಒಂದುವರೆ ವರ್ಷದಿಂದ ಅರ್ಧಕ್ಕೆ ನಿಂತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪ ವಿಭಾಗದ ವತಿಯಿಂದ ಕೈಗೊಂಡಿರುವ ಪ್ರಧಾನಮಂತ್ರಿಯ ಆದರ್ಶ ಗ್ರಾಮದ ಕಾಮಗಾರಿ ಅತಂತ್ರವಾಗಿದ್ದು ಗುತ್ತಿಗೆದಾರರು ಒಂದೂವರೆ ವರ್ಷದಿಂದಲೂ ಇತ್ತ ಸುಳಿದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಸುಮಾರು 9 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಶಾಲಾ ಕೊಠಡಿಗೆ ಮುಹೂರ್ತವೇ ಕೂಡಿಬಂದಿಲ್ಲವೇನೋ ಎಂಬ ಶಂಕೆ ಗ್ರಾಮಸ್ಥರನ್ನು ಕಾಡುತ್ತಿದೆ. ಅರ್ಧಕ್ಕೆ ನಿಂತಿರುವ ಕಟ್ಟಡ ಹಾಗೂ ಮುಂಭಾಗದಲ್ಲಿ ಕಬ್ಬಿಣದ ಸಳಿಗಳು ತುಕ್ಕು ಹಿಡಿದು ಬಾಗಿ ನಿಂತಿವೆ ಇಂಥ ಸ್ಥಿತಿಯಲ್ಲಿ ಕೊಠಡಿ ನಿರ್ಮಾಣವಾದರೆ ಅದರ ಆಯುಷ್ಯವೇನು ಎಂಬುದು ಗ್ರಾಮಸ್ಥರಿಗೆ ಚಿಂತೆಯಾಗಿದೆ.
ಈ ಕುರಿತು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಇಂಜಿನಿಯರ್ ಸಂತೋಷ್ ಲಮಾಣಿ ಅವರನ್ನು ಸಂಪರ್ಕಿಸಿದಾಗ ಗುತ್ತಿಗೆದಾರರಿಗೆ ಈಗಾಗಲೇ ಸೂಚಿಸಲಾಗಿದೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಮತ್ತು ನೋಟೀಸಿಗೆ ಸೂಕ್ತ ಉತ್ತರ ನೀಡದಿದ್ದರೆ ಗುತ್ತಿಗೆಯನ್ನು ರದ್ದುಗೊಳಿಸಿ ಬಾಕಿ ಕಾಮಗಾರಿಗೆ ಮರು ಟೆಂಡರ್ ಕರೆಯುವದಾಗಿ ತಿಳಿಸಿದರು.