ಕಕ್ಕಬೇವಿನಹಳ್ಳಿಯಲ್ಲಿಗವಿಸಿದ್ದೇಶ್ವರ ಸ್ವಾಮಿಯ ರಥೋತ್ಸವ
(ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.04: ಬಳ್ಳಾರಿ ತಾ|| ಕಕ್ಕಬೇವಿನಹಳ್ಳಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಮಠದ 3ನೇ ವರ್ಷದ ಜಾತ್ರಾ ಉಚ್ಛಾಯ ರಥೋತ್ಸವ ಮತ್ತು 5ನೇ ವಾರ್ಷಿಕೋತ್ಸವದಲ್ಲಿ 195 ಜನ ಮುತ್ತೈದೆ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ತಾಯಿ ಮಮತೆಯ ಕರುಣೆಗಿಂತ ಸಕ್ಕರೆಯು ಸಿಹಿ ಉಂಟೇ ಎನ್ನುವಂತೆ, ಹೆಣ್ಣು ಮಕ್ಕಳು ಮಾತೃಸ್ವರೂಪದ ದೇವತೆಗಳೆಂದು, ಶಕ್ತಿಸ್ವರೂಪಿಗಳೆಂದು ಜ್ಞಾನದಾಯಕಳೆಂದು ತಿಂಥಿಣಿಯ ವೀರ ಗೋಟದ ಅಡವಿಲಿಂಗ ತಾತನವರು 195 ಜನ ಹೆಣ್ಣು ಮಕ್ಕಳಿಗೆ ಉಡಿ ತುಂಬಿದ ಬಳಿಕ ಆಶೀರ್ವದಿಸಿ, ಮಾತನಾಡಿ, ತಾಯಿ ಮಕ್ಕಳನ್ನು ಕಾಪಾಡುವಲ್ಲಿ ಅಮೃತ ಪಾನ ಮಾಡಿಸುವ ಸುರದೇವತೆಗಳೆಂದು ವರ್ಣಿಸಿದರು.
ಲೇಬಗಿರಿ ಮಠದ ನಾಗಮೂರ್ತೇಂದ್ರ ಸ್ವಾಮಿಗಳು ಆಶೀರ್ವಚನ ನೀಡುತ್ತ, ಉಡಿ ತುಂಬರುವ ಕಾರ್ಯ ಮಾಡುವುದು ಮುತ್ತೈದೆಯರಿಗೆ ತುಭಪ್ರದ, ಮಂಗಲ ಕಾರ್ಯವಾಗಿದ್ದು, ಭಾರತೀಯ ಸಂಪ್ರದಾಯದಲ್ಲಿ, ವೇದಗಳ ಕಾಲದಿಂದಲೂ ಮಹಿಳೆಯರನ್ನು ಪ್ರೀತಿ ವಿಶ್ವಾಸಗಳಿಂದ ಗೌರವಿಸುವ ಪುರಾತನ ಕಾರ್ಯವಾಗಿ ಬೆಳೆದುಬಂದಿದೆ ಎಂದು ಆಶೀರ್ವದಿಸಿದರು.
ಬೆಣಕಲ್ಲು ಗ್ರಾಮದ ಮರಿಗಾಂಭ ದುರ್ಗಾಂಭ ದೇವಿಯ ದೇವಿ ಉಪಾಸಕರು ಪ್ರಧಾನ ಅರ್ಚಕ, ನಿವೃತ್ತ ಶಿಕ್ಷಕರಾದ ಕಾಳಪ್ಪಾ ಆಚಾರ್ಯ ಇವರು ಮಾತನಾಡುತ್ತ, ಜನರಲ್ಲಿ ಧಾರ್ಮಿಕ ಶ್ರದ್ಧೆ, ದೈವಭಕ್ತಿ ಹೆಚ್ಚಾಗಲು ಶರಣರ ದಾರ್ಶನಿಕರು, ತತ್ವಜ್ಞಾನಿಗಳ ಉಪದೇಶಗಳನ್ನು ಕೇಳುವುದರಿಂದ ಅಂಧಶ್ರದ್ಧೆಗಳು ದೂರವಾಗಿ, ಸತ್ಯಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗುತ್ತದೆ ಎಂದು ತಿಳಿಸುತ್ತಾ ಇಂದಿನ ದಿನಗಳಲ್ಲಿ ಮೊಬೈಲ್, ಟಿ.ವಿ.ಗಳ ಪ್ರಭಾವಿಗಳಾಗಿ, ವಿಜ್ಞಾನ ಸಾಗರದಲ್ಲಿ ಮಾನವ ಮುಳುಗಿ ಹೋಗಿದ್ದಾನೆ, ಧಾರ್ಮಿಕತೆಯನ್ನು ನಿರಾಕರಿಸಿ ತಾಂತ್ರಿಕತೆಯ ದಾಸರಾಗಿದ್ದಾರೆ. ಬುದ್ದಿಯ ಮಿತಿಯು ಮೀರಿ ವಿನಾಶದ ಕಡೆಗೆ ತಿರುಗುವುದನ್ನು ಮಾನವನು ಕಾಣದಾಗಿದ್ದಾನೆ ಎಂದು ತಮ್ಮ ಆಶೀರ್ವಚನದಲ್ಲಿ ಉಪದೇಶಿಸಿದರು.
ಕಾರ್ಯಕ್ರಮದಲ್ಲಿ ಜಂಗಮರ ಹೊಸಳ್ಳಿಯ ಶಂಭುಲಿಂಗ ಶಿವಾಚಾರ್ಯರು, ಉಪ್ಪಾರ ಹೊರಳಿಯ ಶರಣ ಸಾಂಬಯ್ಯ ಸ್ವಾಮಿಗಳು, ಬೆಣಕಲ್ ಬಸಪ್ಪ ಆಚಾರಿ, ಸೋಮಸಮುದ್ರ ಶಿವಮೂರ್ತಿ ಆಚಾರಿ, ಸಿಂಧವಾರ ವಿರುಪಾಕ್ಷಾಚಾರಿ, ರಾರಾವಿ ಗುರಪ್ಪ ಇದ್ದರು.
 ಉಭಯಶ್ರೀಗಳ ತುಲಾಭಾರ
ಕಾರ್ಯಕ್ರಮದಲ್ಲಿ ತಿಂಥಿಣಿಯ ವೀರಗೋಟದ ಅಡವಿಲಿಂಗ ಮಹರಾಜರಿಗೆ ಮತ್ತು ಶ್ರೀ ಮಠದ ಗವಿಸಿದ್ದೇಶ್ವರ ತಾತನವರಿಗೆ 5ನೇ ತುಲಾಭಾರ ಸೇವೆಯನ್ನು ಹೊಸಪೇಟೆ ಕೊಟ್ಯಾಳು ಮರಿಗಾದೆಪ್ಪನವರ ಕೆ.ಚಂದ್ರಶೇಖರ, ಶ್ರೀಮತಿ ಪದ್ಮಾವತಿ ಮತ್ತು ಗೂಳ್ಯಂ ರಾಮಚಂದ್ರ ಇವರ ಸಹೋದರರಿಂದ ಬೆಣಕಲ್ ಭಕ್ತ ರಿಂದ ತುಲಾಭಾರಸೇವೆ ನಡೆಸಿಕೊಟ್ಟರು.
 ಸಂಗೀತ
ಕಾರ್ಯಕ್ರಮದಲ್ಲಿ ಚನ್ನದಾಸರ ದಿ|| ದುರುಗಪ್ಪ, ಮೌನೇಶ್, ಮೆಟ್ರಿ ತಂಡವದರಿಂದ ಏಕತಾರಿ ತತ್ವಪದಗಳ ಗಾಯನ, ಹೊಳಗುಂದಿ ಮಲ್ಲಿಕಾರ್ಜುನ ಸ್ವಾಮಿ, ಕೋಳೂರು ಇವರಿಂದ ವಚನ ತತ್ವಪದಗಳ ನಿರೂಪಣೆ ಮಾಡಿದರು ಮತ್ತು ರಥೋತ್ಸವದ ರಾತ್ರಿ ಚಳ್ಳಕೆರೆಯ ನಾಗಭೂಷಣ ಹುಡೇವು ಇವರ ತಂಡದಿಂದ ನಿಷ್ಕಾಮ ಸಂಗೀತ ಸೇವೆ ನಡೆಯಿತು.
 ಅನ್ನದಾಸೋಹ
ರಥೋತ್ಸವಕ್ಕೆ ಬಂದ ಭಕ್ತರಿಗೆ ಅನ್ನ ದಾಸೋಹ ಸೇವೆ ನಡೆಯಿತು. ಕಕ್ಕಬೇವಿನಹಳ್ಳಿಯ ಶ್ರೀ ಕಕ್ಕೇಶ್ವರ ಮಹಾಲಕ್ಷ್ಮಿ ದೇವಸ್ಥಾನದಿಂದ ಡೊಳ್ಳು, ಮೇಳ, ಭಜನ ವೀರಗಾಸೆ ಕಲಾವಿದರಿಂದ ಮುತ್ತೈದೆಯರ ಅರತಿ ಕಳಸ ಮೇಳಗಳಿಂದ ಶ್ರೀ ಗವಿಸಿದ್ದೇಶ್ವರ ರಥೋತ್ಸವಕ್ಕೆ ಗ್ರಾಮದ ಗಣ್ಯಮಾನ್ಯ ಮುಖಂಡರು, ರಾಜಕಾರಣಿಗಳು, ಗಡಿ ಭಾಗದ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿದರು.