ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ಸಂಡೂರು:ಜು:4: : ಬಸ್ ತಡವಾಗಿ ಬರುವುದಿರಲಿ, ಬಸ್ ಹತ್ತಿದರೆ ಸಾಕು ವಿದ್ಯಾರ್ಥಿಗಳಿಗೆ ಕಂಡಾಕ್ಟರ್ ಹಾಗೂ ಚಾಲಕರಿಂದ ಮಂಗಳಾರತಿ ಪ್ರಾರಂಭವಾಗುತ್ತದೆ ಇಂತಹ ಕೆಟ್ಟ ಬೈಯುಗಳನ್ನು ನಿಲ್ಲಿಸಬೇಕು, ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣಬೇಕು ಎಂದು ವಿದ್ಯಾರ್ಥಿ ಕುಮಾರಸ್ವಾಮಿ, ಸೌಮ್ಯ ಒತ್ತಾಯಿಸಿದರು.
ಅವರು ಪಟ್ಟಣದ ಕೆ.ಎಸ್.ಅರ್.ಟಿ.ಸಿ. ಘಟಕಕ್ಕೆ ತಾಲೂಕಿನ ಜೋಗ, ತಾಳೂರು, ಗಂಗಲಾಪುರ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಘಟಕದ ವ್ಯವಸ್ಥಾಪಕರಿಗೆ ಮುತ್ತಿಗೆ ಹಾಕುವ ಮೂಲಕ ತಮಗೆ ನಿತ್ಯ ಉಂಟಾಗುವ ಬೈಗಳನ್ನು ತಡೆಯಬೇಕು, ಸರಿಯಾದ ಸಮಯಕ್ಕೆ ಬಸ್ ಬಿಡಬೇಕು, ಶಾಲೆಗೆ ಹೋಗಲು ಸಹಕರಿಸಬೇಕೆಂದು ಒತ್ತಾಯಿಸಿದರು.
ಕಂಡಕ್ಟರ್ ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿನಿಯರು ಪ್ರತಿಕ್ರಿಯಿಸಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಗ್ರಾಮಕ್ಕೆ ವಿದ್ಯಾರ್ಥಿಗಳಿಗೆ ಇರುವುದು ಒಂದೇ ಬಸ್ಸು ಅ ಬಸ್ಸಿನಲ್ಲಿ ಶಾಲೆಗೆ ಹೋಗಲು ಬಸ್ಸು ಹತ್ತಿದರೆ ಸಾಕು ಚಾಲಕ ಮತ್ತು ನಿರ್ವಾಹಕ ಇಬ್ಬರೂ ಸೇರಿ, ಏಕ ವಚನದಲ್ಲಿ ವಿದ್ಯಾರ್ಥಿನಿಯರಿಗೆ, ಹಾಗೂ ವಿದ್ಯಾರ್ಥಿಗಳಿಗೆ ಬೈಯುತ್ತಾರೆ, ಅಲ್ಲದೆ ಒಂದಲ್ಲ ಒಂದು ಕಾರಣದಿಂದ ತಡವಾಗಿಯೇ ಬರುತ್ತದೆ, ಇದರಿಂದ ಶಾಲೆಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ನಿತ್ಯ ಶಿಕ್ಷಕರಿಂದ ಶಿಕ್ಷೆ ಪಡೆದೆ ತರಗತಿಗೆ ಹೋಗಬೇಕಾಗಿದೆ, ಕಳೆದ ಶನಿವಾರದಂದು ಪರೀಕ್ಷೆಯನ್ನು ನಡೆಸಿದರೂ ಈ ಬಸ್ಸಿನಲ್ಲಿ ಬರುವ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದಂತಹ ದುಸ್ಥಿತಿ ಉಂಟಾಗಿದೆ, ಅದ್ದರಿಂದ ಇನ್ನು ಮುಂದಾದರೂ ಇಂತಹ ದುಸ್ಥಿತಿ ಉಂಟುಮಾಡದೇ ನಿಮ್ಮ ಮಕ್ಕಳೆಂದು ತಿಳಿದು ಉತ್ತಮ ಚಾಲಕ ಮತ್ತು ನಿರ್ವಾಹಕರೊಂದಿಗೆ ಸರಿಯಾದ ಸಮಯಕ್ಕೆ ಬಸ್ ಕಳುಹಿಸಿ ಎಂದು ಒತ್ತಾಯಿಸಿದರು.
ಘಟಕದ ವ್ಯವಸ್ಥಾಪಕ ಹರಿಕೃಷ್ಣ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳು ಅಗಮಿಸಿದ್ದು ಸರಿ, ಅದರೆ ಅವರಿಗೆ ತಾರಾನಗರದ ವಿದ್ಯಾರ್ಥಿಗಳು ಈ ಬಸ್ಸನ್ನು ತಡೆದ ಪರಿಣಾಮವಾಗಿ ಸರಿಯಾದ ಸಮಯಕ್ಕೆ ಬರಲು ತಡವಾಗಿದೆ, ಅಲ್ಲದೆ ಯಾವುದೇ ಚಾಲಕ ನಿರ್ವಾಹಕ ಈ ರೀತಿ ವರ್ತಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಪಟ್ಟಣದ ಕೆ.ಎಸ್.ಅರ್.ಟಿ.ಸಿ ಘಟಕಕ್ಕೆ ತಾಲೂಕಿನ ಜೋಗ, ತಾಳೂರು, ಇತರ ಗ್ರಾಮದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ ಬೇಕು, ಅಲ್ಲದೆ ಕೆಟ್ಟದ್ದಾಗಿ ಬೈಯುವ ಕಂಡಾಕ್ಟರ್ ಮತ್ತು ಚಾಲಕರು ತಮ್ಮ ಬೈಗುಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.