ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಪತ್ತೆ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.04: ಕಳೆದ ನಾಲ್ಕು-ಐದು ತಿಂಗಳಲ್ಲಿ ಹರಪನಹಳ್ಳಿ ತಾಲೂಕಲ್ಲಿ 7 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಇನ್ನೂ ಅನೇಕ ಜನರು ಜ್ವರದಿಂದ ಬಳಲುತ್ತಿರುವುದು ಆತಂಕ ಉಂಟು ಮಾಡಿದೆ.
ಜೂನ್ತಿಂಗಳಲ್ಲಿ ನೀಲಗುಂದ ಹಾಗೂ ಪಟ್ಟಣದ ಬಾಣಗೇರಿ ಯಲ್ಲಿ ತಲಾ ಒಂದೊಂದು ಡೆಂಘಿ ರೋಗಿಗಳು ಪತ್ತೆಯಾಗಿದ್ದಾರೆ.
ವಾರದ ಹಿಂದೆ ಜಿಲ್ಲಾಸ್ಪತ್ರೆಯಿಂದ ಡಾ.ಕಮಲಾ ಎಂಬುವವರು ಆಗಮಿಸಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಹಾಗೂ ಇಲ್ಲಿಯ ಆಶಾ ಕಾರ್ಯಕರ್ತರಿಗೆ ನಿಯಂತ್ರಣದ ಬಗ್ಗೆ ತರಬೇತಿ ನೀಡಿದ್ದಾರೆ.
ಪ್ರತಿ ಶುಕ್ರವಾರ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಸರ್ವೆ ಮಾಡಲಾಗುತ್ತದೆ, ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಸರ್ವೆ ಕಾರ್ಯ ಮಾಡುತ್ತಿದ್ದು, 15 ದಿನದಲ್ಲಿ ಪೂರ್ಣಗೊಳಿಸಲು ತಾಲೂಕು ಆರೋಗ್ಯ ಇಲಾಖೆ ಸೂಚಿಸಿದೆ.
ಗ್ರಾಮೀಣ ಭಾಗದಲ್ಲಿ ತಾ.ಪಂ ಇಒ ಚಂದ್ರಶೇಖರ ರವರ ಅದ್ಯಕ್ಷತೆಯಲ್ಲಿ ಸಭೆ ಮಾಡಿ ಸ್ವಚ್ಚತಾ ಕಾರ್ಯ ಕೈಗೊಳ್ಳಲು ಗ್ರಾ.ಪಂ ಸಿಬ್ಬಂದಿಗೆ ಸೂಚಿಸಲಾಗಿದೆ.
ಆ ಪ್ರಕಾರ ಪಾಗಿಂಗ್ಮಾಡುವುದು, ಚರಂಡಿ ಸ್ವಚ್ಚತೆ ಹಾಗೂ ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಜ್ವರದಿಂದ ಬಳಲುತ್ತಿದ್ದು, ಹರಪನಹಳ್ಳಿ, ದಾವಣಗೆರೆ ಮುಂತಾದ ಕಡೆ ಆಸ್ಪತ್ರೆಗೆ ಚಿಕಿತ್ಸೆಗೆ ಜನರು ಲಗ್ಗೆ ಇಟ್ಟಿದ್ದಾರೆ.
ಡೆಂಘೀ ಆತಂಕದಿಂದ ಜನರು ಜೀವನ ಸಾಗಿಸುತ್ತಲಿದ್ದು, ಆರೋಗ್ಯ ಇಲಾಖೆ, ತಾಲೂಕು ಆಡಳಿತ ಈ ಕುರಿತು ಇನ್ನೂ ಹೆಚ್ಚಿನ ಮುಂಜಾಗೃತ ವಹಿಸಿ ಸರ್ವೆ, ರಕ್ತ ಪರೀಕ್ಷೆ ಮಾಡುವುದು ಹಾಗೂ ಜನರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.