ಕುಕನೂರುನಲ್ಲಿ ವಾಹನ ಸವಾರರ ದಾಖಲೆ ಪರಿಶೀಲನೆ , ದಂಡ
ಸಂಜೆವಾಣಿ ವಾರ್ತೆ
ಕುಕನೂರು, ಜು.04: ಇಲ್ಲಿಯ ಆರಕ್ಷಕ ಠಾಣೆ ಪಿಐ ಟಿ ಗುರುರಾಜ ಅವರು ಬುಧವಾರದಂದು ವಾಹನ ಸವಾರರ ದಾಖಲೆಗಳನ್ನು ಪರಿಶೀಲಿಸಿದರು. 
ಕುಕನೂರು, ಯಲಬುರ್ಗಾ   ಮುಖ್ಯ ರಸ್ತೆಯಲ್ಲಿ ಯಾರ ಭಯವು ಇಲ್ಲದೇ ಮನಸೋ ಇಚ್ಚೆ, ಕರ್ಕಶ ದ್ವನಿಯೊಂದಿಗೆ  ದ್ವಿಚಕ್ರ ಚಲಾಯಿಸಿಕೊಂಡು ಓಡಾಡುತ್ತಿರುವ ಪಡ್ಡೆ ಹುಡುಗರ ಬೆವರಿಳಿಸಿ, ಕಾನೂನು ಚೌಕಟ್ಟಿನಲ್ಲಿ ವಾಹನ ನಡೆಸುವಂತೆ ಸೂಚಿಸಿದರು.   
ಅದೇ ಮಾರ್ಗವಾಗಿ ದಿನ ನಿತ್ಯ ಓಡಾಡುವ ಅಟೋ ಚಾಲಕರ ಹಾಗೂ ವಿವಿಧ ಖಾಸಗಿ ವಾಹನಗಳ ದಾಖಲಾತಿಗಳನ್ನು  ಹಾಗೂ ಸವಾರರ  ಡ್ರೈವಿಂಗ್ ಲೈಸೆನ್ಸ್, ಇನ್ಸೂರೆನ್ಸ್ ಹಾಗೂ ಇನ್ನಿತರೇ  ದಾಖಲಾತಿಗಳನ್ನು ಪರಿಶೀಲಿಸಿದರು.        
ಜೂನ್ ತಿಂಗಳಲ್ಲಿ ವಾಹನ ಸವಾರರಿಗೆ ಸಭೆ ಕರೆದು ಎಲ್ಲಾ ದಾಖಲಾತಿಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಿ ಎಂದು ತಿಳಿಸಿದ್ದರು.
ಆದರೆ ಅದರಲ್ಲಿ ಇನ್ನೂ ಹಲವಾರು ಸವಾರರು ದಾಖಲಾತಿ ಸಮರ್ಪಕವಾಗಿ ಒದಗಿಸದೇ, ನಿರ್ಲಕ್ಷ್ಯ ವಹಿಸಿದ ಸವಾರರಿಗೆ ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಇವರಿಂದ ತಪ್ಪಿಸಿಕೊಳ್ಳಲು ಹೋದ ಅಟೋ ಒಂದು ಪಲ್ಟಿಯಾಯಿತು. ಆದರೆ ಅದೃಷ್ಟವಶಾತ್  ಯಾವುದೇ ಅನಾಹುತ ಸಂಭವಿಸಿಲ್ಲ.
ಪಿಐ ಟಿ. ಗುರುರಾಜ ಅವರು ವಾಹನ ಚಾಲಕರಿಗೆ ಜಾಗೃತಿ ಮೂಡಿಸಿ ಮಾತನಾಡಿ  ವಾಹನ ಚಾಲಕರು ತಮ್ಮ ಹಾಗೂ ತಮ್ಮ ಕುಟುಂಬದ ಹಿತ ದೃಷ್ಠಿಯಿಂದ ಕಾನೂನು ಪರಿಪಾಲನೆಗೆ ಮುಂದಾಗಬೇಕು, ಎಲ್ಲಾ ದಾಖಲಾತಿ ಸಮರ್ಪಕವಾಗಿ ಇಟ್ಟುಕೊಂಡರೇ ಅವರಿಗೆ ಒಳ್ಳೆಯದು ಇನ್ನೂ   ದ್ವಿಚಕ್ರ  ವಾಹನ ಹಾಗೂ ಇನ್ನಿತರೇ ವಾಹನ ಸವಾರರು ಮಧ್ಯ ಸೇವಿಸಿ ವಾಹನ ಚಾಲನೆ ಮಾಡಬಾರದು.
ಹಿತ ಮಿತ ವೇಗದಿಂದ ವಾಹನ ಚಾಲನೆ ಮಾಡಬೇಕು, ಹೆಲ್ಮೇಟ್ ಕಡ್ಡಾಯವಾಗಿ ಬಳಸಬೇಕು  ಎಂದು  ಹೇಳಿದರು.ಈ ಸಂದರ್ಭದಲ್ಲಿ ಪಿಸಿ ಶರಣಪ್ಪ,  ಮಾರುತಿ ಇದ್ದರು.