ಶ್ರೀ ರಾಮಕೃಷ್ಣ ಗೀತಾಶ್ರಮದ ದಶಮಾನೋತ್ಸವ ನಿಮಿತ್ತ ಯುವ ಸಮ್ಮೇಳನದಾಸ್ಯ ಕಳೆದಿದೆ, ಈಗಲಾದರೂ ಸೆಟೆದು ನಿಲ್ಲಿ: ಸೂಲಿಬೆಲೆ
ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.04: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದ ಬಳಿಕ ಹಲವು ವಿಷಯಗಳಲ್ಲಿ ದಾಸ್ಯ ಕಳೆದುಕೊಂಡ ನಿರಾಳ ಭಾವ ಮೂಡುತ್ತಿದೆ. ಯುವಜನತೆ ಈಗಲಾದರೂ ತಮ್ಮ ಜಡತ್ವವನ್ನು ಬದಿಗಿಟ್ಟು ಸೆಟೆದು ನಿಲ್ಲಬೇಕು ಎಂದು ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಲ್ಲಿನ ಶ್ರೀ ರಾಮಕೃಷ್ಣ ಗೀತಾಶ್ರಮದ ದಶಮಾನೋತ್ಸವ ಹಾಗೂ ಶ್ರೀ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ ಕರ್ನಾಟಕ ಅರ್ಧವಾರ್ಷಿಕ ಸಭೆಯ ಹಿನ್ನೆಲೆಯಲ್ಲಿ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಯುವ ಸಮ್ಮೇಳನದಲ್ಲಿ ಅವರು ಉಪನ್ಯಾಸ ನೀಡಿದರು. ‘ದಾಸ್ಯದ ಪರಿಕಲ್ಪನೆ ದಕ್ಷಿಣ ಭಾರತೀಯರಾದ ನಮಗೆ ಅಷ್ಟಾಗಿ ಗೊತ್ತಾಗುವುದಿಲ್ಲ. ಉತ್ತರ ಭಾರತ, ಗಡಿ ಭಾಗಕ್ಕೆ ಹೋದಾಗ ನಾವು ಎಂತಹ ಸ್ಥಿತಿಯಲ್ಲಿದ್ದೆವು ಎಂಬುದ ತಿಳಿಯುತ್ತದೆ. ಇಂದು ಸಮರ್ಥ ನಾಯಕತ್ವ ದೇಶಕ್ಕೆ ಇರುವ ಕಾರಣಕ್ಕೆ ಶತ್ರುಗಳು ಸಹ ನಮ್ಮನ್ನು ಕಂಡು ಭಯಪಡುವ ಸ್ಥಿತಿ ಇದೆ. ಸ್ವಾಮಿ ವಿವೇಕಾನಂದರು ಹೇಳಿದಂತಹ ನಾಯಕತ್ವ ಗುಣ ನಿಜವಾಗಿ ಪ್ರದರ್ಶನಗೊಳ್ಳುತ್ತಿರುವುದು ಈಗ. ಈ ಹಂತದಲ್ಲೂ ನಮ್ಮ ಯುವಜನತೆ ತಮ್ಮ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ವಿವೇಕ ವಾಣಿಯಂತೆ ನಡೆಯುವ ಧೈರ್ಯ ತೋರಬೇಕು’ ಎಂದು ಅವರು ಸಲಹೆ ನೀಡಿದರು. ‘ವಿವೇಕಾನಂದರು ಇಂದು ನಮ್ಮೊಂದಿಗಿಲ್ಲ, ಆದರೆ ಅವರ ಚಿಂತನೆಗಳು ಅವರ ಭಾಷಣ, ಪುಸ್ತಕಗಳ ರೂಪದಲ್ಲಿ ನಮ್ಮ ಮುಂದೆ ಇದೆ. ಅದರಿಂದ ಅದೆಷ್ಟೋ ಮಂದಿ ಪ್ರಭಾವಿತರಾಗಿ ತಮ್ಮ ಜೀವವನ್ನೇ ಬದಲಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ತನ್ನ ನಂತರವೂ ಇಷ್ಟು ಅಗಾಧ ಪ್ರಮಾಣದಲ್ಲಿ ಜನರನ್ನು ಮೋಡಿ ಮಾಡುತ್ತಾರೆ ಎಂದರೆ ಅದು ವಿವೇಕಾನಂದರ ಶಕ್ತಿಯ ಸಂಕೇತ. ಯುವಜನತೆಯ ಮೇಲೆ ಅವರು ಇಟ್ಟಿದ್ದ ಅಪಾರ ನಂಬಿಕೆಯನ್ನು ಸಾಕಾರಗೊಳಿಸುವ ಕೆಲಸವನ್ನು ನಾವು ಮಾಡಬೇಕು’ ಎಂದರು.
ಕುರಿಗಳಾಗಬೇಡಿ, ಸಿಂಹಗಳಾಗಿ:
ಗದಗ-ವಿಜಯಪುರ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದಜಿ ಮಹಾರಾಜ್ ಮಾತನಾಡಿ, ಭಾರತೀಯರಾದ ನಾವೆಲ್ಲ ಸಿಂಗಳಾದರೂ ಕುರಿಗಳಂತೆ ಬದುಕಿದ್ದೇವೆ. ವಿವೇಕಾನಂದರು ತಮ್ಮ ಮಾತುಗಳ ರೂಪದಲ್ಲಿ ನಮ್ಮ ಜತೆಗಿದ್ದಾರೆ. ಇನ್ನು ಮೇಲಾದರೂ ನಾವು ಸಿಂಹಗಳೇ ಎಂಬುದನ್ನು ತೋರಿಸಬೇಕಾಗಿದೆ ಎಂದರು. ‘ಭಾರತೀಯರ ರಕ್ತದಲ್ಲಿ ಬಹಳ ದೊಡ್ಡ ಶಕ್ತಿ ಇದೆ. ಅನಾಗರಿಕ ದೇಶದವರನ್ನೂ ನಾಗರಿಕರನ್ನಾಗಿ ಮಾಡಿದ್ದು ನಾವು. ಅದಕ್ಕೆ ಕಾರಣ ನಮ್ಮ ಸಂಸ್ಕೃತಿ, ಪರಂಪರೆ. ನಾವು ಬೆಳೆದ ರೀತಿ ಮತ್ತು ನಮಗೆ ಸಿಕ್ಕಿದಂತಹ ಸಂಸ್ಕಾರ. ಭಾರತೀಯರಲ್ಲಿ ಹರಿಯತ್ತಿರುವ ಆರ್ಯರ ರಕ್ತದ ಶಕ್ತಿಯ ಬಗ್ಗೆ ವಿವೇಕಾನಂದರಿಗೆ ಬಹಳ ನಂಬಿಕೆ ಇತ್ತು, ಅದನ್ನು ಉಳಿಸುವ ಕೆಲಸ ಯುವ ಜನತೆಯಿಂದ ಆಗಬೇಕು’ ಎಂದು ಹೇಳಿದರು. ‘ಅದ್ಭುತವಾಗಿ ಬದುಕುವ ಟಾನಿಕ್ ನಮಗೆ ಕೊಡಬೇಕಿತ್ತು, ಆದರೆ ಅದನ್ನು ನಮಗೆ ಕೊಟ್ಟವರಿಲ್ಲ, ವಿವೇಕಾನಂದ ಅವರು ಈ ಕೆಲಸ ಮಾಡಿದರು. ವಿವೇಕಾನಂದರೇ ನಿಮಗೆ ಪ್ರೇರಣೆ ಆಗದಿದ್ದರೆ ಜಗತ್ತಿನಲ್ಲಿ ಬೇರೆ ಯಾರೂ ಪ್ರೇರಣೆ ಆಗಲು ಸಾಧ್ಯವಿಲ್ಲ, ವಿದ್ಯಾರ್ಥಿಗಳಿಗೆ ವಿವೇಕ ಸಂದೇಶ ತಲುಪುವ ಕೆಲಸವಾಗಬೇಕು’ ಎಂದು ಅವರು ತಿಳಿಸಿದರು.
ಹೈದಾರಾಬಾದ್‌ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಮಯಾನಂದಜಿ ಮಹಾರಾಜ್ ಮಾತನಾಡಿ,‘ನಾನು ಸ್ವಾತಂತ್ರ್ಯ ತಂದುಕೊಟ್ಟರೆ ಅದನ್ನು ಉಳಿಸಿಕೊಳ್ಳುವವರು ಯಾರು ಎಂದು ವಿವೇಕಾನಂದರು ಕೇಳಿದ್ದರು. ಇನ್ನು 50 ವರ್ಷಗಳ ಬಳಿಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಬಹುದು ಎಂದು 1900ರಲ್ಲೇ ವಿವೇಕಾನಂದರು ತಿಳಿಸಿದ್ದರು. ಅವರ ಮಾತು ನಿಜವಾಗಿದೆ. ನಾಯಕತ್ವ ಕೊರತೆ ಸ್ವಾತಂತ್ರ್ಯದ ಬಳಿಕವೂ ಕಾಡುತ್ತಲೇ ಇತ್ತು. ಅದರ ಸ್ಪಷ್ಟ ಚಿತ್ರಣ ಸಿಗಬೇಕಿದ್ದರೆ ನಾವು ಗಡಿ ಭಾಗಕ್ಕೆ ಹೋಗಬೇಕು’ ಎಂದರು. ‘ಬ್ರಿಟಿಷರು ಮಾಡಿದ ಅನ್ಯಾಯ ಒಂದೆರಡಲ್ಲ. ಬಂಗಾಳವನ್ನು ವಿಭಜಿಸಿದ್ದು ದೇಶಕ್ಕೆ ಎದುರಾದ ಮೊದಲ ದೊಡ್ಡ ಆಘಾತವಾಗಿತ್ತು. ಬಕಿಂಗ್‌ಹ್ಯಾಮ್ ಅರಮನೆಯ ಬಚ್ಚಲು ಮನೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅದರ ಫಲವಾಗಿ ಇಂದು ಬಾಂಗ್ಲಾದೇಶ ನಮ್ಮದಲ್ಲದೆ ಹೋಯಿತು. ಕೋಲ್ಕತ್ತದಿಂದ ತ್ರಿಪುರಾಕ್ಕೆ ಹೋಗಬೇಕಾದರೆ ನಾಲ್ಕು ದಿನ ರೈಲು ಪ್ರಯಾಣ ಮಾಡಬೇಕಿತ್ತು. ಇತ್ತೀಚೆಗಷ್ಟೇ ಬಾಂಗ್ಲಾ ಸರ್ಕಾರದೊಂದಿಗೆ ರೈಲು ಒಪ್ಪಂದ ಆಗಿರುವುದು ಐತಿಹಾಸಿಕ ನಿರ್ಧಾರ’ ಎಂದರು. ‘ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ದಿನಕ್ಕೆ 30 ನಿಮಿಷ ಧ್ಯಾನ ಮಾಡಿ, ವಿವೇಕಾನಂದರ ಕುರಿತು ಓದಿ’ ಎಂದು ಅವರು ಯುವಜನತೆಗೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರಿಗೆ ಯುವ ಸಮುದಾಯದ ಮೇಲೆ ಅಪಾರ ನಂಬಿಕೆ ಇತ್ತು. ಯುವಕರು ಅವರ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಯುವಕರು ಶೈಕ್ಷಣಿಕ ಸವಾಲುಗಳನ್ನು ಎದುರಿಸುವಲ್ಲಿ ವಿವೇಕಾನಂದರ ಚಿಂತನೆ ನೆರವಿಗೆ ಬರುತ್ತದೆ. ಶೈಕ್ಷಣಿಕ ಸಾಧನೆ ಮಾತ್ರವಲ್ಲ, ಯುವಕರ ಆಂತರಿಕ ಶಕ್ತಿಯನ್ನು ಉತ್ತೇಜಿಸುವ ಕೆಲಸ ಆಗಬೇಕು, ಇದುವರೆಗೆ ಅದು ಆಗಿರಲಿಲ್ಲ ಎಂದರು.
ಬೆಂಗಳೂರು ಹಲಸೂರಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜಿ ಮಹಾರಾಜ್‌, ದಾವಣಗೆರೆ ರಾಮಕೃಷ್ಣ ಮಿಶನ್‌ ಆಶ್ರಮದ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್‌, ರಾಣೆಬೆನ್ನೂರಿನ ಶ್ರೀರ ರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶನಂದಜಿ ಮಹಾರಾಜ್‌ ವೇದಿಕೆಯಲ್ಲಿದ್ದರು. ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು.
ಕಿಕ್ಕಿರಿದ ಯುವಪಡೆ:
 ವಾಸವಿ ಕಲ್ಯಾಣ ಮಂಟಪದಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಕಿಕ್ಕಿರಿದು ಸೇರಿದ್ದದು. ಆಸನಗಳೆಲ್ಲ ಭರ್ತಿಯಾಗಿದ್ದಕ್ಕೆ ನೆಲದಲ್ಲೇ ಕುಳಿತು ಸ್ವಾಮೀಜಿಗಳು ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣವನ್ನು ನಿಶ್ಯಬ್ದವಾಗಿ ಆಲಿಸಿದರು.