ಕಾಯಂ ಮಾಡುವಾಗ ಜೇಷ್ಠತೆ ಪರಿಗಣಿಸಿ
ಸಂಜೆವಾಣಿ ನ್ಯೂಸ್
ಮೈಸೂರು:ಜು.04:- ಮಹಾನಗರ ಪಾಲಿಕೆಯ 252 ಪೌರಕಾರ್ಮಿಕರ ಕಾಯಂ ನೇಮಕಾತಿ ಪ್ರಕ್ರಿಯೆ ವೇಳೆ ಪೌರಕಾರ್ಮಿಕರ ಜೇಷ್ಠತೆಯನ್ನು ಪ್ರಧಾನವಾಗಿ ಪರಿಗಣಿಸುವಂತೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘದ ಜಿಲ್ಲಾ ಸಮಿತಿ ವತಿಯಿಂದ ಪಡುವಾರಹಳ್ಳಿಯ ಬಾಬು ಜಗಜೀವನ್‍ರಾಂ ಭವನದಲ್ಲಿ ನೇಮಕಾತಿ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಸಂಘದ ರಾಜ್ಯಾಧ್ಯಕ್ಷರೂ ಆದ ಮಾಜಿ ಮೇಯರ್ ನಾರಾಯಣ ಮಾತನಾಡಿ, ಪ್ರಸ್ತುತ ಮಹಾನಗರ ಪಾಲಿಕೆಯಲ್ಲಿ 1300 ಪೌರಕಾರ್ಮಿಕರು ನೇರ ಪಾವತಿ ಮತ್ತು ಹೆಚ್ಚುವರಿ ಪಾವತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 252 ಪೌರಕಾರ್ಮಿಕರು ಕಾಯಂಗೊಳ್ಳಲಿದ್ದಾರೆ. ಈ ವೇಳೆ ಪೌರಕಾರ್ಮಿಕರ ಜೇಷ್ಠತೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಅರ್ಜಿ ಸಲ್ಲಿಸಲು 55 ವರ್ಷ ವಯಸ್ಸು ನಿಗದಿಪಡಿಸಿದ್ದಾರೆ. ಕೆಲವು ಕಾರ್ಮಿಕರಿಗೆ ಈಗಾಗಲೇ 53, 54 ವರ್ಷವಾಗಿದೆ. ಇವರಿಗೆ ಮೊದಲ ಪ್ರಾಶಸ್ತ್ಯ ಕೊಡಬೇಕು. ಈಗ ಇವರನ್ನು ಕಾಯಂ ಮಾಡದಿದ್ದರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ನೇಮಕಾತಿ ಪ್ರಾಧಿಕಾರ ಇದನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಹೇಳಿದರು.
ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರವೇ ಮಾಡುತ್ತಿದೆ. ಇದರಲ್ಲಿ ಯಾರ ಮಧ್ಯಪ್ರವೇಶ ಇಲ್ಲ. ಆದರೆ, ಕೆಲವು ಪೌರಕಾರ್ಮಿಕ ಮುಖಂಡರು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಕೇಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪೌರಕಾರ್ಮಿಕರು ಮೋಸ ಹೋಗಬಾರದು ಎಂದು ಹೇಳಿದರು.
ಈಗಾಗಲೇ 18 ವರ್ಷ ಸೇವೆ ಮಾಡಿದ್ದಾರೆ. ಎಲ್ಲ ದಾಖಲಾತಿಗಳು ಸರಿ ಇವೆ. ಆದರೂ ಕೆಲವು ಪೌರಕಾರ್ಮಿಕರು ದಾಖಲೆಗಳ ಜೆರಾಕ್ಸ್ ಪ್ರತಿ ಪಡೆಯುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವೂ ನಡೆಯಲಿದೆ ಎಂದು ಎಚ್ಚರಿಸಿದರು.
ದಾಖಲೆಗಳ ತಿದ್ದುಪಡಿ: ಇಎಸ್‍ಐ, ಪಿಎಫ್ ದಾಖಲಾತಿಗಳನ್ನು ಅರ್ಜಿ ಸಲ್ಲಿಕೆ ವೇಳೆ ಪರಿಗಣಿಸಲಾಗುತ್ತಿದೆ. ದಾಖಲೆಗಳನ್ನು ತಿದ್ದುಪಡಿ ಮಾಡಿ ನಕಲಿ ದಾಖಲೆ ಪಡೆಯಲಾಗುತ್ತಿದೆ. ಈಗಾಗಲೇ ಕೆಲ ಪೌರಕಾರ್ಮಿಕರು ನಕಲಿ ದಾಖಲೆ ಪಡೆದುಕೊಂಡಿದ್ದಾರೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಸಚಿವರು ಮತ್ತು ಮೈಸೂರು ಜಿಲ್ಲಾಧಿಕಾರಿಗಳಿಗೆ ದೂರು ಕೊಡುವುದಾಗಿ ಹೇಳಿದರು.
ಜಿಲ್ಲಾಧ್ಯಕ್ಷ ಆರ್ಟಿಸ್ಟ್ ನಾಗರಾಜ್ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ 252 ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಗೆ ಜು.18ರಂದು ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ನೇಮಕಾತಿ ವೇಳೆ ಹಲವು ಅಕ್ರಮಗಳನ್ನು ನಡೆಯುವ ಸಾಧ್ಯತೆ ಇದ್ದು, ಪೌರಕಾರ್ಮಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಆರ್.ಶಿವಣ್ಣ, ಮುಖಂಡರಾದ ಯತಿರಾಜ್, ಆರ್.ದಾಸ್, ಜಯರಾಮು, ಅರುಣ್‍ಕುಮಾರ್, ಪಿ.ಮಂಜುನಾಥ್, ಶಂಕರ್‍ಬಾಬು, ಮಹದೇವು, ರೈಲ್ವೆ ಗಂಗಣ್ಣ, ಎಂ.ಡಿ.ವೆಂಕಟೇಶ್, ಗುರುದತ್ತ.ಎನ್.ಪಿ, ಶಂಕರಪ್ಪ, ಶೇಷ, ವಿಜಯ್ ಮುಂತಾದವರು ಇದ್ದರು.