ಗುಂಡಿ ಮುಚ್ಚಲೂ ಹಣವಿಲ್ಲದ ಸ್ಥಿತಿ ಬಂದಿದೆ
ಸಂಜೆವಾಣಿ ನ್ಯೂಸ್
ಮೈಸೂರು:ಜು.04:- ಡ್ರೈನೇಜ್ ಇಲ್ಲ, ರಸ್ತೆ, ಬೀದಿಗೂ ಅನುದಾನ ಇಲ್ಲ. ಸಣ್ಣ ಗುಂಡಿಗಳನ್ನು ಮುಚ್ಚುವುದಕ್ಕೂ ಹಣವಿಲ್ಲದ ಸ್ಥಿತಿ ನಮಗೆ ಮತ್ತು ರಾಜ್ಯಕ್ಕೆ ಬಂದಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬೇಸರ ಹೊರಹಾಕಿದರು.
ತಾಲೂಕಿನ ಕೆಲ್ಲಹಳ್ಳಿ ಚಾಮುಂಡೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಭೂಂಇಪೂಜೆ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಬಂದು ಹದಿಮೂರು ತಿಂಗಳಾಯಿತು. ಸಣ್ಣ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಚರಂಡಿ ನಿರ್ಮಾಣಕ್ಕೂ ಹಣವಿಲ್ಲ. ಗುಂಡಿ ಮುಚ್ಚುವುದಕ್ಕೂ ಸಾಧ್ಯವಿಲ್ಲದಂತಾಗಿದೆ ಎಂದು ಹೇಳಿದರು.
ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಅದನ್ನು ಪೂರೈಸಲು 60 ಸಾವಿರ ಕೋಟಿ ಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುತ್ತಿಲ್ಲ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವೆಂದು ಪುರುಷರ ಬಸ್ ದರ ಜಾಸ್ತಿ ಮಾಡಿದರು. ವಿದ್ಯುತ್ ದರ ಹೆಚ್ಚಿಸಿ ರೈತರು, ಮಧ್ಯಮ ವರ್ಗದವರಿಗೆ ತೊಂದರೆ ಆಗಿದೆ. ಈ ಸರ್ಕಾರದಲ್ಲಿ ಯಾವುದಕ್ಕೂ ಹಣವಿಲ್ಲದಂತಾಗಿದೆ ಎಂದು ಲೇವಡಿ ಮಾಡಿದರು.
ಪ್ರತಿಯೊಂದರ ಮೇಲೂ ಹಣ ವಸೂಲಿ ಮಾಡುವುದಕ್ಕೆ ದರ ಹೆಚ್ಚಳ ಮಾಡಿದ್ದಾರೆ. ಜೆಡಿಎಸ್ ಮುಗಿಸಬೇಕೆಂಬ ಗುರಿ ಹೊಂದಿ ಹೊರಟರು. ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡರ ದೈವತ್ವದ ಬಲದಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಇರುವಂತೆ ಮಾಡಲು ಮತ್ತು ದೊಡ್ಡ ಜವಾಬ್ದಾರಿ ನೀಡಿ ಉಕ್ಕು ಮತ್ತು ಕೈಗಾರಿಕೆ ನೀಡಿದರು. ಜೆಡಿಎಸ್ ಮುಗಿದೇ ಹೋಯಿತೆಂದು ಹೇಳುವವರಿಗೆ ಭ್ರಮ ನಿರಶನವಾಗಿದೆ. ಜೆಡಿಎಸ್ ಉಳಿಸಿದವರು ನೀವು. ನನ್ನನ್ನು ಗೆಲ್ಲಿಸಿ ರಾಜಕೀಯವಾಗಿ ಶಕ್ತಿ ತುಂಬಿದವರು ನೀವು ಎಂದು ತಿಳಿಸಿದರು.
ಕೆರೆ, ನಾಲೆ ಕೆಲಸ ಮಾಡಲು ಆಗುತ್ತಿಲ್ಲ. ಕೆರೆ ತುಂಬಿಸಲು ಆಗುತ್ತಿಲ್ಲ. ಕ್ಷೇತ್ರದ ಜನರ ಕೆಲಸ ಮಾಡಲು ಸಾಧ್ಯವಾಗಲಿಲ್ಲವೆಂದರೆ ಯಾಕೆ ಎಂಎಲ್‍ಎ ಆಗಬೇಕಿತ್ತು ಅನ್ನಿಸುತ್ತದೆ. ಆದರೆ, ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿಕೊಂಡು ಹೋಗಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡಲಾಗುವುದು ಎಂದು ನುಡಿದರು.
ರೈತರು ಜಮೀನುಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಉಳುಮೆ ಮಾಡಿ ಜಮೀನು ಉಳಿಸಿಕೊಳ್ಳದೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಕಲ್ಲಹಳ್ಳಿ ಗ್ರಾಮದಲ್ಲಿ ಹೆಚ್ಚು ಮಾರಾಟ ಮಾಡದೆ ಕಾಪಾಡಿಕೊಂಡು ಬಂದಿದ್ದಾರೆ. ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲು, ಒಂಟಿಕೊಪ್ಪಲಿನ ಜನರು ಮಾರಾಟ ಮಾಡಿದ್ದಾರೆ. ಒಂದೊಂದು ಮದುವೆಗೆ 15-20 ಲಕ್ಷ ಖರ್ಚು ಮಾಡಿ ಮದುವೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಗ್ರಾಮಗಳ ಜನರು ಬಂದಾಗ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ತಹಸೀಲ್ದಾರ್, ತಾಪಂ ಕಚೇರಿ ಸೇರಿ ಯಾವುದೇ ಕೆಲಸಗಳ ವಿಚಾರದಲ್ಲೂ ಬಂದರೆ ಸ್ಪಂದಿಸಿ ಪರಿಹರಿಸುವ ಕೆಲಸ ಮಾಡಿದ್ದೇನೆ. ಜನರಿಂದ ಆಯ್ಕೆಯಾಗಿರುವ ನನಗೆ ಅವರ ಸೇವೆಯೇ ಮುಖ್ಯವಾಗಿದೆ. ಅದಕ್ಕಾಗಿ ಜನರು ನನ್ನನ್ನು ಕೈಬಿಟ್ಟಿಲ್ಲ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಮಂತ್ರಿಯಾದ ಮೇಲೆ ಜಿ.ಟಿ.ದೇವೇಗೌಡರು ಜವಾಬ್ದಾರಿ ಹೊರಬೇಕೆಂದು ಹೇಳುತ್ತಿದ್ದಾರೆ. ಈ ಹೊಣೆಯನ್ನು ತೆಗೆದುಕೊಂಡರೆ ಆರ್ಥಿಕ ಶಕ್ತಿ ಇಲ್ಲ. ಸಂಘಟನೆಗೆ ಏನು ಬೇಕಾದರೂ ಮಾಡಬಲ್ಲೆ. ರಾಜ್ಯಾದÀ್ಯಂತ ಪ್ರವಾಸ ಮಾಡಬೇಕಿದೆ. ಆದರೆ, ಆರ್ಥಿಕ ಶಕ್ತಿ ಇಲ್ಲದೆ ಕಷ್ಟವಾಗಿದೆ. ನೀವುಗಳು ಎಚ್.ಡಿ.ದೇವೇಗೌಡರು ಕಟ್ಟಿರುವ ಪಕ್ಷವನ್ನು ಉಳಿಸಿಕೊಳ್ಳಬೇಕು. ನಿಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎನ್ನುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಹಾಗಾದಾಗ ಮಾತ್ರ ಶಕ್ತಿ ಮೀರಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಪಕ್ಷ ಗಟ್ಟಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷ ಉಳಿಸಬೇಕು. ಜೆಡಿಎಸ್ ಬೇರು ಅಲುಗಾಡದಂತೆ ತಡೆಯಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.