ಸೊಳ್ಳೆಗಳ ಸಂತತಿ ನಿಯಂತ್ರಿಸುವುದು ಅನಿವಾರ್ಯ: ಡಾ.ದೀಪ್ತಿಶೆಟ್ಟಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.04: ಸೊಳ್ಳೆಗಳಿಂದಾಗಿ ನಾನಾ ರೀತಿಯ ಕಾಯಿಲೆಗಳು ಬರುತ್ತಿದ್ದು ಸೊಳ್ಳೆಗಳ ಸಂತತಿ ಹೆಚ್ಚಾಗದಂತೆ ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ಅಕ್ಕಿಹೆಬ್ಬಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪ್ತಿಶೆಟ್ಟಿ ತಿಳಿಸಿದರು.
ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಲೇರಿಯಾ ನಿಯಂತ್ರಣದ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಲೇರಿಯಾ ಹರಡುವ ಅನಾಪಿಲಿ ಸೊಳ್ಳೆಯ ಸಂತತಿಯನ್ನು ನಿಯಂತ್ರಿಸುವುದು ಹಾಗೂ ಸೊಳ್ಳೆಗಳು ಮೊಟ್ಟೆ ಇಟ್ಟು ಮರಿ ಮಾಡುವ ಸ್ಥಳಗಳನ್ನು ಗುರುತಿಸಿ ನೀರು ಹೆಚ್ಚು ದಿನಗಳ ಕಾಲ ನಿಲ್ಲದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಜನಸಾಮಾನ್ಯರಿಗೆ ಮನೆಮನೆಗಳಿಗೆ ತೆರಳಿ ಅರಿವು ಮೂಢಿಸುತ್ತಿದ್ದಾರೆ. ಮಲೇರಿಯಾ ರೋಗ ಹರಡುವ ಮತ್ತು ರೋಗ ನಿಯಂತ್ರಣದ ಬಗ್ಗೆ ಮಲೇರಿಯಾ ಕಾಯಿಲೆ ನಿರ್ಮೂಲನೆ ಮಾಡಲು ಗ್ರಾಮ ಪಂಚಾಯಿತಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ರೋಗ ನಿಯಂತ್ರಣದ ಬಗ್ಗೆ ಸಹಕಾರ ನೀಡಬೇಕು. ಗ್ರಾಮ ಪಂಚಾಯತಿ ಸದಸ್ಯರು ಜನರಿಂದ ಚುನಾಯಿತರಾಗಿರುವುದರಿಂದ ನಿಮ್ಮ ಮಾತುಗಳನ್ನು ಜನರು ಹೆಚ್ಚಾಗಿ ಕೇಳುತ್ತಾರೆ ಸಾರ್ವಜನಿಕರಿಗೆ ಮಾಹಿತಿ ನೀಡಲು ನಿಮಗೆ ಈ ತರಬೇತಿ ನೀಡುತ್ತಿದ್ದೇವೆ. ಮಲೇರಿಯ ನಿರ್ಮೂಲನೆ ನಮ್ಮ ನಿಮ್ಮ ಗುರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅಕ್ಕಿ ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್, ಆರೋಗ್ಯ ನಿರಕ್ಷಣಾಧಿಕಾರಿ ಮಂಚೇಗೌಡ, ಧರ್ಮೇಂದ್ರ, ಸತೀಶ್, ಅಶ್ವಿನಿ ಸುಗುಣ ಸೇರಿದಂತೆ ಗ್ರಾಮ ಪಂಚಾಯತಿಯ ಸದಸ್ಯರುಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಾರ್ವಜನಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.