ವೀರಶೈವ ಮಹಾಸಭಾ ಚುನಾವಣೆ: ಎಲ್ಲದಕ್ಕೂ ಸಿದ್ದರಿದ್ದೇವೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.04: ತಾಲ್ಲೂಕು ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಇಡೀ ಸಮುದಾಯ ಒಕ್ಕೊರಲಿನಿಂದ ಚುನಾವಣೇ ಎದುರಿಸದೇ ಅವಿರೋಧ ಆಯ್ಕೆಗೆ ನಾವು ಸಿದ್ದವಿದ್ದೇವೆ, ಅಗತ್ಯಬಿದ್ದರೆ ಚುನಾವಣೆಗೂ ಸಿದ್ದ ಎಂದು ತಾಲ್ಲೂಕು ವೀರಶೈವ ಮಹಾಸಭಾದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರು ಪಟ್ಟಣದ ಸುಭಾಷ್ ನಗರದ ಚನ್ನಬಸವೇಶ್ವರ ಪತ್ತಿನಸಹಕಾರ ಸಂಘದ ಆವರಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ತಾಲ್ಲೂಕು ವೀರಶೈವ ಮಹಾಸಭಾ ಮುಖಂಡ ತೋಟಪ್ಪಶೆಟ್ಟಿ ಮಾತನಾಡಿ ಕಳೆದ ಹಲವು ವರ್ಷಗಳಿಂದಲೂ ಮಹಾನ್ ಸಾಧನೆ ಮಾಡುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಆಡಳಿತ ಮಂಡಳಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ. ತಾಲ್ಲೂಕಿನ ವೀರಶೈವ ಸಮಾಜದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೇ, ಅಭಿವೃದ್ದಿ ಮಾಡದೇ ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಇದರಿಂದ ತಾಲ್ಲೂಕಿನ ವೀರಶೈವ ಸಮಾಜದ ಬಂಧುಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಚುನಾವಣಾ ಸಮಯ ಬಂದಿದ್ದು ಎಲ್ಲರೂ ಒಗ್ಗೂಡಿ ಅವಿರೋಧವಾಗಿ ಮಾತುಕತೆಯ ಮೂಲಕ ಎಲ್ಲವನ್ನು ಬಗೆಹರಿಸಿಕೊಳ್ಳಲು ನಾವುಗಳು ಸಿದ್ದರಿದ್ದೇವೆ. ಇದಕ್ಕೆ ಕೆಲವರು ಅಪಸ್ವರ ಎತ್ತುವ ನಿರೀಕ್ಷೆ ಇದೆ. ಸರ್ವ ಸಮ್ಮತ ತೀರ್ಮಾನಕ್ಕೆ ಬರಲು ಒಪ್ಪದಿದ್ದಲ್ಲಿ ನಾವುಗಳೂ ಸಹ ಚುನಾವಣೆಗೆ ಹೋಗಲು ಸಿದ್ದರಿದ್ದೇವೆ. ಆದ್ದರಿಂದ ಸಮಾಜದ ಮುಖಂಡರುಗಳು ಚುನಾವಣೆಯ ಆಯ್ಕೆ ಸಂಬಂಧ ಉತ್ತಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ನಮ್ಮ ಅನಿಸಿಕೆಯಾಗಿದೆ ಎಂದು ತಿಳಿಸಿದ ಮುಖಂಡರು ತಾಲ್ಲೂಕಿನಲ್ಲಿ ವೀರಶೈವ ಸಮುದಾಯ ಬಿಟ್ಟರೆ ಬೇರೆ ಯಾವ ಸಮುದಾಯದಲ್ಲೂ ಚುನಾವಣೆ ನಡೆಯುತ್ತಿಲ್ಲ ಇದು ಬೇಸರದ ಸಂಗತಿಯಾಗಿದೆ ಆದ್ದರಿಂದ ವೀರಶೈವ ಮುಖಂಡರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ಯಾಂಕ್‍ಪರಮೇಶ್, ಸಾಸಲುಈರಪ್ಪ, ನಿವೃತ್ತ ಶಿಕ್ಷಕ ಚನ್ನರಾಜು, ತಾಪಂ ಮಾಜಿ ಸದಸ್ಯ ಮಾಧವಪ್ರಸಾದ್, ವಕೀಲ ಪುರಮಂಜು, ಸಾಸಲು ಗುರುಮೂರ್ತಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.