ಶೈಕ್ಷಣಿಕ ಮಹತ್ವ ಸಾರುವ ’ನಗುವ ನಕ್ಷತ್ರಗಳು’
ಮಾಲೂರು, ಜು.೪- ಶೈಕ್ಷಣಿಕ ಮಹತ್ವವನ್ನು ಸಾರುವ ಮಕ್ಕಳ ಚಲನಚಿತ್ರ ’ನಗುವ ನಕ್ಷತ್ರಗಳು’ ಜಿ.ಸಿ.ಕೇಶವ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಈ ಚಲನಚಿತ್ರ ತಾಲೂಕಿನ ಪ್ರತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು, ಶಿಕ್ಷಕರು ನೋಡಬೇಕಾದ ಉತ್ತಮ ಮಕ್ಕಳ ಚಲನಚಿತ್ರ ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.
ಅವರು ಪಟ್ಟಣದ ಶಿಬಿರ ಕಚೇರಿಯ ಆವರಣದಲ್ಲಿ ನಡೆದಕ್ಷೀರ ಸಂವೃದ್ಧಿ ಉತ್ಸವ ೨೦೨೪ ಕಾರ್ಯಕ್ರಮದಲ್ಲಿ ಸ್ನೇಹ ಪಿಕ್ಚರ್ಸ್‌ನ ’ನಗುವ ನಕ್ಷತ್ರಗಳು’ ಚಲನಚಿತ್ರದ ಆಡಿಯೋ, ಟೀಸರ್ ಮತ್ತು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ತಾಲೂಕಿನಲ್ಲಿ ಚಿತ್ರೀಕರಣಗೊಂಡಿರುವ ’ನಗುವ ನಕ್ಷತ್ರಗಳು’ ಚಲನಚಿತ್ರದಲ್ಲಿ ರಾಜ್ಯದ ಹಿರಿಯ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಅದರಲ್ಲೂ ಮಕ್ಕಳು ನಗುವ ನಕ್ಷತ್ರಗಳಾಗಿ ಅಭಿನಯಿಸಿರುವುದು ಗಮನಾರ್ಹವಾದುದು. ನಿರ್ಮಾಪಕ ಹಾಗೂ ನಿರ್ದೇಶಕ ಜಿ.ಸಿ.ಕೇಶವ್ ರವರು ನಿದೇರ್ಶಿಸಿರುವ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನಗುವ ನಕ್ಷತ್ರಗಳು ಚಲನಚಿತ್ರಕ್ಕೆ ಜಿ.ಟಿ. ರಾಮಚಂದ್ರಪ್ಪ ರವರ ಕಥೆ, ಮುತ್ತುರಾಜ್ ರವರ ಸಂಕಲನ, ಮಾಸ್ಟರ್ ನಿಕ್ಷಿತ್ ರವರ ಸಂಗೀತ, ಜಮುಚಂದ್ರ ರವರು ಗೀತ ರಚನೆ ಮಾಡಿದ್ದಾರೆ ಎಂದ ಅವರು ತಾಲೂಕಿನ ಎಲ್ಲಾ ಶಾಲೆಗಳ ಮಕ್ಕಳು ಪೋಷಕರು ಶಿಕ್ಷಕರು ಸಿನಿಮಾ ವಿಕ್ಷಿಸುವ ಮೂಲಕ ಜಿ.ಕೇಶವ್ ಅವರನ್ನು ಪ್ರೋತ್ಸಾಹಿಸುವಂತೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಕಾಂತಮ್ಮ ಸೋಮಣ್ಣ, ಗೋವರ್ಧನರೆಡ್ಡಿ, ಚೈತನ್ಯ ಕಲಾನಿಕೇತನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್, ಶಿಕ್ಷಕರಾದ ಕೃಷ್ಣಪ್ಪ, ಶಾರದಮ್ಮ, ಚಂದ್ರಕಲಾ, ಛಾಯ ಹಾಗೂ ನಟ, ನಟಿಯರು ಹಾಜರಿದ್ದರು.