ಪತ್ರಕರ್ತರ ಕಲ್ಯಾಣನಿಧಿಗೆ 1 ಕೋಟಿ ರೂ. ಸಂಗ್ರಹ
ಕೋಲಾರ,ಜು.೪: ಕೋಲಾರ ಜಿಲ್ಲೆಯ ಪತ್ರಕರ್ತರ ಸಮಗ್ರ ಕ್ಷೇಮಾಭಿವೃದ್ಧಿಗಾಗಿ ಸಂಘದಿಂದಲೇ ಸಂಪೂರ್ಣ ನೆರವಾಗುವ ನಿಟ್ಟಿನಲ್ಲಿ ಪತ್ರಕರ್ತರ ಕಲ್ಯಾಣನಿಧಿಗೆ ಒಂದು ಕೋಟಿ ರೂ ಸಂಗ್ರಹಿಸಿ ಠೇವಣಿ ಇಡುವುದೇ ಮುಂದಿನ ಪ್ರಮುಖ ಕಾರ್ಯಸೂಚಿ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸಂಜೆ ನಡೆದ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದುವರೆಗೂ ಸರಿಸುಮಾರು ೫ ಲಕ್ಷ ರೂಗಳನ್ನು ಠೇವಣಿ ಇರಿಸಲಾಗಿದ್ದು, ಹಂತಹಂತವಾಗಿ ಇದನ್ನು ಒಂದು ಕೋಟಿ ರೂವರೆಗೂ ಮುಟ್ಟಿಸಲಾಗುವುದು. ಇದರಿಂದ ಬಂದ ಬಡ್ಡಿ ಹಣದಲ್ಲಿ ಸಂಘದ ಸದಸ್ಯರು ಮತ್ತು ಅವರು ಕುಟುಂಬದವರ ಆಪತ್ಕಾಲಿನ ಸಂದರ್ಭದಲ್ಲಿ ಜೀವವಿಮೆ ಹಾಗೂ ಆರೋಗ್ಯ ವಿಮೆಗಳ ರೀತಿಯಲ್ಲಿ ಆರ್ಥಿಕವಾಗಿ ನೆರವು ದೊರಕಿಸುವುದೇ ಕಲ್ಯಾಣನಿಧಿಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಳೆದ ಎರಡೂವರೆ ವರ್ಷದಿಂದ ತಮ್ಮ ತಂಡವು ಆತ್ಮಸಾಕ್ಷಿಗೆ ಅನುಗುಣವಾಗಿ ಸಂಘದ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಇದೇ ರೀತಿ ಮುಂದಿನ ಆರು ತಿಂಗಳ ಅವಧಿಯಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ಇಲ್ಲದಂತೆ ಮುಂದುವರೆಸಲಾಗುವುದು ಎಂದು ಹೇಳಿದರು.ಆರು ತಿಂಗಳ ಒಳಗೆ ಕೋಲಾರದ ಪತ್ರಕರ್ತರ ಭವನದಲ್ಲಿ ಪ್ರತಿದಿನ ರಿಯಾಯಿತಿ ದರದ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಎರಡೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರ ಸಹಕಾರದೊಂದಿಗೆ ಉತ್ತಮ ಕಾರ್ಯಚಟುವಟಿಕೆಗಳನ್ನು ನಡೆಸಲಾಗಿದೆ. ಸಂಘದ ಯಾವುದೇ ಕಾರ್ಯಕ್ರಮಕ್ಕೆ ಯಾರಿಂದಲೂ ನೆರವು ಬಯಸದೆ ಸಂಘದ ಸಂಪನ್ಮೂಲದಿಂದಲೇ ಭರಿಸಲಾಗುತ್ತಿದೆ ಎಂದು ತಿಳಿಸಿದರು.
ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಸಂಘದ ಲೆಕ್ಕಪತ್ರಗಳ ಒಂದು ವರ್ಷದ ಆಡಿಟ್ ವರದಿಯನ್ನು ಮಂಡಿಸಿ ಸಂಘವು ಈ ವರ್ಷದಲ್ಲಿ ೧೫,೪೧,೧೮೮ ರೂಗಳ ವಹಿವಾಟು ನಡೆಸಿದೆ ಮತ್ತು ೨.೬೬.೬೬೬ ಲಕ್ಷ ರೂ ಉಳಿತಾಯದ ಲಾಭವನ್ನು ಸಂಗ್ರಹಿಸಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಪತ್ರಕರ್ತರ ಭವನದಲ್ಲೇ ವಿಕಲಚೇತನರ ಸುಗಮ ಪ್ರವೇಶಕ್ಕೆ ಸುಲಭವಾಗುವಂತೆ ರ್‍ಯಾಂಪ್ ವ್ಯವಸ್ಥೆ ಮಾಡಬೇಕೆಂದು ಸಲಹೆ ಮಾಡಿದರು ಹಾಗೂ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ರಾಜ್ಯ ಸಂಘಕ್ಕೆ ಸಲ್ಲಿಸಲು ತಿಳಿಸಿದರು.ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಎಲ್ಲಾ ತಾಲೂಕು ಸಂಘಗಳು ನಿಯಮಿತವಾಗಿ ಕಾರ್ಯಕಾರಿ ಸಮಿತಿ ಸಭೆ ಮತ್ತು ಸರ್ವ ಸದಸ್ಯರ ಸಭೆಗಳನ್ನು ನಡೆಸಿ ಜಿಲ್ಲಾ ಸಂಘಕ್ಕೆ ವರದಿಯನ್ನು ಸಲ್ಲಿಸಬೇಕೆಂದು ನುಡಿದರು.ಸದಸ್ಯರಾದ ಅಬ್ಬಣಿ ಶಂಕರ್ ಮತ್ತು ಬಿ.ಸುರೇಶ್ ಮಾತನಾಡಿ, ಸಂಘದ ಆರ್ಥಿಕ ವ್ಯವಹಾರ ಮತ್ತು ಕಾರ್ಯಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಸದಸ್ಯ ಓಂಕಾರಮೂರ್ತಿ ಮಾತನಾಡಿ, ಮೈಸೂರಿನಲ್ಲಿ ಪತ್ರಕರ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಅದನ್ನು ಇಲ್ಲಿಯೂ ಅನುಸರಿಸಬಹುದು ಎಂದು ಹೇಳಿದರು.
ಸರ್ವಸದಸ್ಯರ ಸಭೆಯಲ್ಲಿ ಸಂಘದ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಪದಾಧಿಕಾರಿಗಳು, ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತ ಸದಸ್ಯರು ಹಾಜರಿದ್ದರು.