ಜಿಲ್ಲಾ ಕ್ರೀಡಾಂಗಣ ಉದ್ಘಾಟನೆಗೆ ಸಜ್ಜುಗೊಳಿಸಲು ಡಿಸಿ ಸೂಚನೆ
ಕೋಲಾರ,ಜು೪:ನಗರದ ಸರ್.ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣವನ್ನು ಉನ್ನತ್ತೀಕರಣಗೊಳಿಸಲಾಗುತ್ತಿದ್ದು, ಉದ್ಘಾಟನೆಗೆ ಸಜ್ಜುಗೊಳಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಆಡಳಿತಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದ್ದ, ಜಿಲ್ಲಾ ಕ್ರೀಡಾ ನಿರ್ವಹಣಾ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು, ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಳವಡಿಸಿರುವ ಸಿಂಥೆಟಿಕ್ ಅಥ್ಲೆಟಿಕ್ ಟ್ರಾಕ್ ಮತ್ತು ಬಾಕಿಯಿರುವ ಕಾಮಗಾರಿ ನಿರ್ವಹಣೆಯ ಬಗ್ಗೆ ಚರ್ಚೆ ಮಾಡಿದರು. ಸಿಂಥೆಟಿಕ್ ಅಥ್ಲೆಟಿಕ್ ಟ್ರಾಕ್ ಅಳವಡಿಸಿದ ನಂತರ ಮೂರನೇ ಪಕ್ಷಗಾರರಿಂದ ಪರಿಶೀಲಿಸಿ ವರದಿ ತರಸಿಕೊಳ್ಳುವಂತೆ ಸೂಚಿಸಿದರು. ಸಿಂಥೆಟಿಕ್ ಅಥ್ಲೆಟಿಕ್ ಟ್ರಾಕ್ ಕಾಮಗಾರಿ ಬಳಕೆ ಮತ್ತು ಶುಲ್ಕ ನಿಗಧಿಪಡಿಸುವ ಬಗ್ಗೆ ಮಾತನಾಡಿದ ಅವರು ಸರ್ಕಾರದ ನಿಯಮಾವಳಿಗಳನ್ನು ಅಧ್ಯಯನ ಮಾಡಿ ಇಲಾಖಾ ಮುಖ್ಯಸ್ಥರ ಗಮನಕ್ಕೆ ತಂದು ಪುನಃ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಕ್ರೀಡಾ ವಸತಿ ನಿಲಯವನ್ನು ಉದ್ಘಾಟನೆಗೆ ಸಜ್ಜು ಮಾಡಬೇಕೆಂದರು. ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಮತ್ತು ಹೊರಾಂಗಣ ಜಿಮ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಕಲ್ಪಿಸಲು ನಗರಸಭೆ ವತಿಯಿಂದ ಕಾಮಗಾರಿ ನಿರ್ವಹಿಸಬೇಕೆಂದರು.
ಹಾದು ಹೋಗುವ ರಸ್ತೆಯಲ್ಲಿ ಬೀದಿ ದೀಪಗಳ ವ್ಯವಸ್ಥೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಕ್ರೀಡಾಂಗಣಕ್ಕೆ ಬೋರ್‌ವೆಲ್ ಕೊರೆಸದೆ ಯರಗೋಳ ಯೋಜನೆಯ ನೀರನ್ನು ಬಳಸಿಕೊಳ್ಳುವಂತೆ ಮತ್ತು ಕುಡಿಯುವ ನೀರಿಗಾಗಿ ಆರ್.ಓ ಪ್ಲಾಂಟ್ ವ್ಯವಸ್ಥೆಯನ್ನು ಮಾಡಿಸುವಂತೆ ಸೂಚಿಸಿದರು. ವೇಮಗಲ್ ಹೋಬಳಿ ಮಟ್ಟದ ಕ್ರೀಡಾಂಗಣದಲ್ಲಿ ನೀರು ಸಂಗ್ರಹಣಾ ತೋಟ್ಟಿ ನಿರ್ಮಿಸಬೇಕಾದ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ನಗರದ ಒಳಾಂಗಣದ ಕ್ರೀಡಾಂಗಣದ ಷಟಲ್ ಬ್ಯಾಡ್ಮಿಂಟನ್ ಅಂಕಣದ ಮರದ ನೆಲಹಾಸನ್ನು ಸಿಎಸ್‌ಆರ್ ಚಟುವಟಿಕೆಯಡಿ ಅಳವಡಿಸಿಕೊಳ್ಳಲು ಸೂಕ್ತ ಪ್ರಸ್ತಾವನೆ ಸಲ್ಲಿಸಿ ಕ್ರೀಡಾ ಪಟುಗಳಿಗೆ ಒಳ್ಳೆಯ ಬೆಳಕು ನೀಡುವ ಲೈಟಿಂಗ್ ವ್ಯವಸ್ಥೆಯನ್ನು ಮಾಡಿಕೊಡುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಮಮೂರ್ತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ, ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಎ.ರಾಜವೇಲು, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಎನ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್. ರಾಘವೇಂದ್ರ, ಕಾರ್ಯದರ್ಶಿ ರಾಜೇಶ್ ಬಾಬು, ಹಿರಿಯ ಕ್ರೀಡಾ ಪಟು ಎಚ್.ಜಗನ್ನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.