ನೇರಳೆ ಬೆಳೆ,ಮಾದರಿ ರೈತ ವೇಣುಗೋಪಾಲ್
ಕೋಲಾರ,ಜು,೪- ವಿವಿಧ ಬಗೆಯ ಕೃಷಿ ಪ್ರಯೋಗದಲ್ಲಿ ಕೋಲಾರದ ಜಿಲ್ಲೆಯು ಎತ್ತಿದ ಕೈ ಬಹುಪಾಲು ಮಳೆಯಾಧಾರಿತ ಕೃಷಿಯನ್ನೇ ನೆಚ್ಚಿಕೊಂಡಿರುವ ಇಲ್ಲಿನ ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಕೃಷಿಯ ಬಗ್ಗೆ ಚಿಂತನೆ ಮಾಡಿ ಕಾರ್ಯಗತಗೊಳಿಸುತ್ತಾರೆ. ಅಂತಹ ಯಶೋಗಾಥೆಗೆ ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ ಬೆಂಗಳೂರಿನ ಬಿಎಂಟಿಸಿ ಸಂಸ್ಥೆಯ ನಿರ್ವಾಹಕ ವೇಣುಗೋಪಾಲ ತಮ್ಮಗಿರುವ ಮೂರು ಎಕರೆಯಲ್ಲಿ ೭ ವರ್ಷಗಳ ಹಿಂದೆ ನೇರಳೆ ಗಿಡ ನಾಟಿ ಮಾಡಿದ್ದು ಕಳೆದ ನಾಲ್ಕು ವರ್ಷದಿಂದ ಆದಾಯಗಳಿಸುತ್ತಿದ್ದಾರೆ.
ಗಿಡ ನಾಟಿ ಮಾಡಿದ ಮೂರು ವರ್ಷಕ್ಕೆ ಫಸಲು ಬಿಡಲಾರಂಭಿಸಿದ್ದು, ಲಕ್ಷಕ್ಕೆ ಮೊದಲ ಫಸಲು ಮಾರಾಟ ಮಾಡಿದ್ದಾರೆ. ನಂತರ ಎರಡು ವರ್ಷಗಳಿಗೆ ಉತ್ತಮ ಆದಾಯ ಮಾಡಿಕೊಂಡಿದ್ದಾರೆ.
ಇದೀಗ ಒಟ್ಟು ತೋಟವನ್ನು ಮೂರು ವರ್ಷಗಳವರೆಗೆ ಲಕ್ಷಾಂತರ ರೂ. ಆದಾಯ ಮಾಡಲಾಗಿದೆ.
ಇತರೆ ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಹೋಲಿಕೆ ಮಾಡಿದರೆ ನೇರಳೆ ಗಿಡಕ್ಕೆ ಖರ್ಚು ಕಡಿಮೆಯಾಗುತ್ತೆ. ಈ ಹಿಂದೆ ಕೂಲಿಯಾಳುಗಳಿಗೆ ದುಬಾರಿ ಕೂಲಿ ಕೊಡಬೇಕಿತ್ತು. ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಆದರೆ ನೇರಳೆ ಬೆಳೆಗೆ ಯಾವುದೇ ದುಬಾರಿ ಬಂಡವಾಳವಿಲ್ಲ. ಕಡಿಮೆ ಖರ್ಚಿನಲ್ಲಿ ವಾರ್ಷಿಕ ಬೆಳೆಯಾದ ನೇರಳೆಯಿಂದ ಉತ್ತಮ ಫಸಲು ಬರುತ್ತಿದೆ.
ಇನ್ನು ಒಂದು ಸಸಿ ಸರಾಸರಿ ೪೦ ಕೆಜಿ ಹಣ್ಣನ್ನು ಬಿಡುತ್ತದೆ. ಕೆಲವೊಂದು ನೇರಳೆ ಮರಗಳು ೬೦ ಕೆಜಿ ವರೆಗೂ ಸಹ ಹಣನ್ನು ಬಿಡುತ್ತವೆ. ಅಲ್ಲದೆ ನೇರಳೆ ಬೆಳೆಗೆ ವಾರ್ಷಿಕ ಖರ್ಚು ೨೦ ರಿಂದ ೩೦ ಸಾವಿರ ರೂಪಾಯಿ ಮಾತ್ರ ಬರುತ್ತದೆ. ಹೂ ಬಿಡುವ ಹಂತದಲ್ಲಿ ಎರಡು ಮೂರು ಬಾರಿ ಔಷಧಿಯನ್ನು ಸಿಂಪಡಣೆ ಮಾಡಿದರೆ ಸಾಕು ಮತ್ತೆ ಯಾವುದೇ ರೀತಿಯ ಖರ್ಚು ಇರುವುದಿಲ್ಲ. ಬೇಸಿಗೆಯಲ್ಲಿ ಸ್ವಲ್ಪ ನೀರು ಹಾಯಿಸಿದರೆ ಸಾಕು ಉತ್ತಮ ಫಸಲು ಪಡೆಯಬಹುದು ಎಂದು ರೈತ ವೇಣುಗೋಪಾಲ ಹೇಳಿದರು.
ಔಷಧೀಯ ಗುಣಗಳನ್ನು ಹೊಂದಿರುವ ನೇರಳೆಗೆ ಎಲ್ಲೆಡೆ ಭಾರಿ ಬೇಡಿಕೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ ೧೦೦ ರಿಂದ ೧೫೦ ರೂಪಾಯಿವರೆಗೂ ಬೆಲೆ ಇದೆ. ಒಟ್ಟು ತೋಟವನ್ನು ಮೂರು ವರ್ಷಗಳವರೆಗೆ ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡಲಾಗಿದೆ.
ಇದು ಕಡಿಮೆ ಖರ್ಚಿನ ಅಧಿಕ ಲಾಭದ ಬೆಳೆಯಾಗಿದೆ. ತೋಟಗಾರಿಕೆ ಇಲಾಖೆಯಿಂದಲೂ ಸಹ ನೇರಳೆ ಗಿಡಗಳಿಗೆ ಸಹಾಯಧನ ಪಡೆಯದೇ, ಸ್ವಂತ ಹಣದಲ್ಲಿ ಲಾಭವನ್ನು ಕಾಣಲಾಗುತ್ತಿದೆ.
ಔಷದಿಯ ಗುಣ ಹೊಂದಿರುವ ನೇರಳೆ ಹಣ್ಣುಗಳಲ್ಲಿ ಅದರಲ್ಲೂ ಜಂಬುನೇರಳೆ ತಳಿಗೆ ಸೇರಿದ ನೇರಳೆ ಹಣ್ಣು ಸಕ್ಕರೆ ಕಾಯಿಲೆ ರೋಗಿಗಳಿಗೆ ಅತ್ಯಾವಶ್ಯಕವಾದ ಹಣ್ಣಾಗಿದ್ದು, ಇದರಲ್ಲಿ ಸಕ್ಕರೆ ಕಾಯಿಲೆ ತಡೆಯುವ ಔಷಧೀಯ ಗುಣಹೊಂದಿರುವ ಜಂಬುನೇರಳೆ ಹಣ್ಣುಗಳಿಗೆ ಬಾರೀ ಬೇಡಿಕೆಯಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ನೆರೆಯ ಆಂಧ್ರ ಹಾಗೂ ತಮಿಳು ನಾಡುಗಳಲ್ಲಿ ಜಂಬುನೇರಳೆ ಹಣ್ಣಿಗೆ ಬಾರಿ ಬೇಡಿಕೆಯಿದೆ.
ಒಟ್ಟಾರೆ ನಾನಾ ರೀತಿಯ ತರಕಾರಿ ಬೆಳೆ ಬೆಳೆದು ರೈತರು ಕೈ ಸುಟ್ಟಿಕೊಳ್ಳುವ ಬದಲಿಗೆ ಕಡಿಮೆ ಬಂಡವಾಳದ ನೇರಳೆ ಬೆಳೆ ಬೆಳೆಯುವುದರಿಂದ ರೈತರು ಉತ್ತಮ ಆದಾಯ ಪಡೆಯಬಹುದು ಎಂಬುದು ರೈತ ವೇಣುಗೋಪಾಲ್‌ರ ಮಾತಾಗಿದೆ.