ಅಪರಾಧ ಮುಕ್ತ ಸಮಾಜಕ್ಕೆ ಸಂಸ್ಕಾರ ಅಗತ್ಯ
ಕೋಲಾರ,ಜು,೪- ಅಪರಾಧ ಮುಕ್ತ ಸಮಾಜಕ್ಕಾಗಿ ಇಂದು ಶಿಕ್ಷಣದ ಜತೆ ಮಕ್ಕಳಿಗೆ ಸಂಸ್ಕಾರ,ಮೌಲ್ಯಗಳು, ಕಾನೂನುಗಳ ಅರಿವನ್ನು ನೀಡುವ ಅಗತ್ಯವಿದೆ ಎಂದು ಬಂಗಾರಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೇಶವಮೂರ್ತಿ ಕರೆ ನೀಡಿದರು.
ಜಿಲ್ಲೆಯ ಬಂಗಾರಪೇಟೆ ಕನ್ನಡ ಸಂಘದಿಂದ ಪಟ್ಟಣದ ಕುವೆಂಪು ವೃತ್ತದಲ್ಲಿ ನಡೆದ ೧೨೨ನೇ ತಿಂಗಳ ಕನ್ನಡ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿ, ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ಶೇ.೧೦೦ ಸಾಧನೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣವೆಂದರೆ ಕೇವಲ ಪಠ್ಯ ಓದಿಗೆ ಸೀಮಿತವಲ್ಲ, ಕ್ರೀಡೆ,ಸಾಂಸ್ಕೃತಿಕ ನೆಲಗಟ್ಟಿನ ಜತೆಗೆ ಇಂದು ಅತ್ಯಗತ್ಯವಾಗಿ ಸಂಸ್ಕಾರ, ನೈತಿಕ ಮೌಲ್ಯಗಳು, ಬದುಕಿಗೆ ಅಗತ್ಯವಾದ ಕಾನೂನುಗಳ ಕುರಿತು ಕಲಿಸುವ ಅಗತ್ಯವಿದೆ ಎಂದು ತಿಳಿಸಿದರು.
ಶಿಕ್ಷಣ ಮಾತೃಭಾಷೆಯಲ್ಲೇ ಕಲಿತರೆ ಅತಿ ಬೇಗ ಮನನವಾಗುತ್ತದೆ, ಬದುಕಿಗೆ ಹತ್ತಿರವಾಗಿರುತ್ತದೆ ಎಂದ ಅವರು, ಕನ್ನಡ ನಾಡು,ನುಡಿಯ ಕುರಿತು ಆಚರಿಸುವ ಸಂಭ್ರಮ ರಾಜ್ಯೋತ್ಸವದ ದಿನಕ್ಕೆ ಸೀಮಿತವಾಗಬಾರದು, ಬಂಗಾರಪೇಟೆ ಕನ್ನಡ ಸಂಘ ಕನ್ನಡತನವನ್ನು ನಿರಂತರವಾಗಿ ಉಳಿಸಿಕೊಂಡು ಪ್ರತಿ ತಿಂಗಳು ಸಾಧಕರನ್ನು ಗೌರವಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅರಿವು-ನೆರವು ಕಾರ್ಯಕ್ರಮಕ್ಕೂ ಚಾಲನೆ ನೀಡಿದ ನ್ಯಾಯಾಧೀಶರು, ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜೀವನ ನಡೆಸಬೇಕು, ಕಾನೂನನ್ನು ಮೀರಿ ನಡೆದರೆ ಶಿಕ್ಷೆ ಖಚಿತ ಎಂದು ಎಚ್ಚರಿಸಿ, ಭ್ರೂಣಾವಸ್ಥೆಯಿಂದ ಮರಣದ ನಂತರವೂ ಮರಣ ಪ್ರಮಾಣ ಪತ್ರ ಪಡೆಯಲು ಕಾನೂನು ಆವರಿಸಿಕೊಂಡಿದ್ದು, ಇದರ ಅರಿವು ಪ್ರತಿಯೊಬ್ಬರಿಗೂ ಅಗತ್ಯವಿದ್ದು, ಕಾನೂನು ಅರಿತಾಗ ನೆಮ್ಮದಿಯ ಜೀವನ ಸಾಧ್ಯ ಎಂದರು.
ಬಂಗಾರಪೇಟೆ ವಕೀಲರ ಸಂಘದ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ,ವಿದ್ಯಾರ್ಥಿಗಳು ನಿಮ್ಮ ಕಲಿಕಾ ಸಾಧನೆ ಜತೆಗೆ ಸಂಸ್ಕಾರ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಮಾತನಾಡಿ, ಕನ್ನಡ ಸಂಘದಿಂದ ೧೨೨ನೇ ತಿಂಗಳ ಕಾರ್ಯಕ್ರಮ ಇದಾಗಿದ್ದು, ಪ್ರತಿ ತಿಂಗಳು ಯಾರಿಗೂ ಕಾಯದೇ ಕನ್ನಡ ಕಾರ್ಯಕ್ರಮ ನಡೆಯುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳ ಸಾಧನೆ ಮಾಡಿರುವ ಆದರ್ಶ ವಿದ್ಯಾಲಯದ ಸಾಧಕ ವಿದ್ಯಾರ್ಥಿನಿಯರಾದ ಗಂಗೋತ್ರಿ, ಗಾಯತ್ರಿ, ದೀಕ್ಷಿತಾ, ಚೈತನ್ಯ, ಹೆಚ್.ಕೆ.ರಷ್ಮಿತಾ, ಎನ್.ಗೀತಾರನ್ನು ಸನ್ಮಾನಿಸಲಾಯಿತು.
ರಾಜ್ಯದ ಹೆಸರಾಂತ ಹಾಸ್ಯ ಕಲಾವಿದ ಹಾಗೂ ಮಿಮಿಕ್ರಿ ಮಾಂತ್ರಿಕ ಪಟ್ಟಾಭಿರಾಮಸುಳ್ಯ ರಿಂದ ನಕ್ಕುನಗಿಸುವ ಹಾಸ್ಯ ಕಾರ್ಯಕ್ರಮ, ನಾಗ ಶೈನಿಂಗ್ ಸ್ಟಾರ್ ಅಕಾಡೆಮಿ, ಡ್ಯಾನ್ಸ್ ಪ್ರಿಕ್ ತಂಡ ಬೆಮೆಲ್ ನಗರ ಹಾಗೂ ನಾಟ್ಯಾಂಜಲಿ ಕಲಾ ತಂಡದವರಿಂದ ಅಮೋಘ ನೃತ್ಯ ಪ್ರದರ್ಶನ ಜನಮನಸೂರೆಗೊಂಡಿತು.
ಮುಖಂಡರಾದ ಅಪ್ಸರ್ ಪಾಷಾ,ಆದರ್ಶ ವಿದ್ಯಾಲಯದ ಶ್ಯಾಮಲ, ಕನ್ನಡ ಸಂಘದ ಪದಾಧಿಕಾರಿಗಳಾದ ಹೇಮಂತ್‌ಕುಮಾರ್,ಬಿ.ಜಿ.ನಂಜಪ್ಪ, ಮುರಳಿ ಪ್ರಸಾದ್, ವೈ.ವಿ.ರಮೇಶ್, ಪರ್ವತ್‌ಸ್ಪೋರ್ಟ್ಸ್‌ನ ಆನಂದರೆಡ್ಡಿ, ಶಿವಮಹೇಶ್, ದೇವೇಂದ್ರಕುಮಾರ್, ರಾಮಚಂದ್ರ, ಜಯಕುಮಾರ್, ನಂಜುಂಡಪ್ಪ, ಮಂಜುನಾಥ್, ವಕೀಲರಾದ ಜಯಪ್ರಕಾಶ್, ವೇಣುಗೋಪಾಲ್, ಮುಖಂಡ ಬಾ.ಶೇಖರಪ್ಪ,ಕುಮುದಿನಿ, ಸೂರ್ಯನಾರಾಯಣರಾವ್, ವೆಂಕಟೇಶ್ವರಚಾರಿ, ಗಂಗಾಧರ್ ಮತ್ತಿತರರಿದ್ದರು.