ಮಾದಕ ವಸ್ತುಗಳ ಬಗ್ಗೆ ಜಾಗೃತಿವಹಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೪; ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದವರು ಮನುಷ್ಯತ್ವ ಮರೆತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು ಮತ್ತು ಆತ್ಮಹತ್ಯೆ ಅಂತಹ ಕೃತ್ಯಗಳು ನಡೆಯುತ್ತವೆ ಇದರಿಂದ ಮಾದಕ ವಸ್ತುಗಳ ಬಗ್ಗೆ ಜಾಗೃತವಹಿಸಿ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಹೇಳಿದರು.ನಗರದ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಕಾರಾಗೃಹ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಜಾಗೃತಿ ಹಾಗೂ ಮಾನಸಿಕ ಆರೋಗ್ಯ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರಪ್ರತಿ ವರ್ಷವೂ ಜೂನ್ 26ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಆಚರಿಸಲಾಗುತ್ತದೆ. “ಸಾಕ್ಷವು ಸ್ಪಷ್ಟವಾಗಿದೆ ತಡೆಗಟ್ಟುವಲ್ಲಿ ಹೂಡಿಕೆ ಮಾಡಿ” ಎಂಬುದು ಈ ಬಾರಿಯ ಘೋಷವಾಕ್ಯವಾಗಿದೆ. ಮಾದಕ ವಸ್ತುಗಳಲ್ಲಿ ಗಾಂಜಾ, ಅಫೀಮ ಮೊದಲಾದವುಗಳು ಮಾತ್ರೆ, ಫೌಡರ್, ಇಂಜೆಕ್ಷನ್ ಹಲವಾರು ರೂಪಗಳಲ್ಲಿ ತೆಗೆದುಕೊಳ್ಳುತ್ತಾರೆ. ಮಾದಕ ವಸ್ತುಗಳನ್ನು ತೆಗೆದುಕೊಳ್ಳುವವರು ಮಾದಕ ವಸ್ತುಗಳ ವ್ಯಸನಿಗಳಾಗಿ ಮಾದಕ ವಸ್ತುಗಳ ದಾಸರಾಗುತ್ತಾರೆ. ಕೋಟ್ಯಾಂತರ ಯುವಕರು ವ್ಯಸನಕ್ಕೆ ಒಳಗಾಗಿ ಹಲವಾರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.
ವಿವಿಧ ಇಲಾಖೆಗಳ ಸಹಕಾರದೊಂದಿಗೆ ವ್ಯಸನದಿಂದ ಮುಕ್ತವಾಗಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು. ವ್ಯಸನದಿಂದ ಮುಕ್ತರಾಗಲು ಮನೋಚೈತನ್ಯ ಶಿಬಿರಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಮನೋವೈದ್ಯರು, ಕ್ಲಿನಿಕಲ್ ಸೈಕಾಲಜಿಸ್ಟ್ ಅವರನ್ನು ಸಂಪರ್ಕಿಸಿ ಚಿಕಿತ್ಸೆ, ಸಲಹೆ ಮತ್ತು ಸಮಲೋಚನೆ ಪಡೆಯಬಹುದು ಹಾಗೂ ಟೆಲಿ ಮಾನಸ ಉಚಿತ ಸಹಾಯವಾಣಿ ಸಂಖ್ಯೆ 14416 ಗೆ ಕರೆಮಾಡಿ ಸಲಹೆ ಸಮಾಲೋಚನೆ ಪಡೆಯಬೇಕು ಎಂದು ತಿಳಿಸಿದರು.ಮನೋವೈದ್ಯ ಡಾ.ಆರ್.ಮಂಜುನಾಥ್ ಉಪನ್ಯಾಸ ನೀಡಿ, ಬಿಡಿ, ಸಿಗರೇಟ್ ಮತ್ತು ಮಾದಕ ವಸ್ತುಗಳ ಮೇಲೆ ಎಚ್ಚರಿಕೆ ಸಂದೇಶ ಇದ್ದರೂ ನಾವು ಅದನ್ನು ಉಪಯೋಗಿಸುತ್ತೇವೆ. ಯಾಕೆಂದರೆ ಆಹ್ಲಾದ ಅಥವಾ ಕಿಕ್‍ಗಾಗಿ ಸ್ವಲ್ಪದಿಂದ ಶುರು ಮಾಡಿ ಜಾಸ್ತಿ ಮಾದಕ ವಸ್ತುಗಳನ್ನು ತೆಗೆದುಕೊಂಡು ದಿನದಿನಕ್ಕೆ ನರಗಳ ಸವೆತದಿಂದ, ಪ್ರಜ್ಞಾಹೀನ ಸ್ಥಿತಿ ತಲುಪಿ ಸರಿ ತಪ್ಪುಗಳ ಅರಿವು ಇರುವುದಿಲ್ಲ ತಪ್ಪುಗಳ ನಡೆಯುತ್ತವೆ. ಇದಕ್ಕೆ ಕಾರಣ ನಾವು ಸೇವಿಸುವ ಮಾದಕ ವಸ್ತು ಅಥವಾ ದ್ರವ್ಯಗಳು ಕಾರಣವಾಗಿರುತ್ತವೆ. ವ್ಯಸನಿಯಾದಾಗ ಮನುಷ್ಯನು ನಿಯಂತ್ರಣದಲ್ಲಿರುವುದಿಲ್ಲ ವಿವೇಕ ಕಳೆದುಕೊಳ್ಳುತ್ತಾನೆ ಎಂದು ತಿಳಿಸಿದರು.