ಶಿಕ್ಷಕರ ಪುನಶ್ಚೇತನ ಕಾರ್ಯಗಾರ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೩:ಹೊಸದುರ್ಗ ತಾಲೂಕು  ಭಾರತ ಸೇವಾದಳ  ಶಿಕ್ಷಕರ  ತಾಲ್ಲೂಕು  ಮಟ್ಟದ  ಪುನಶ್ಚೇತನ ಕಾರ್ಯಗಾರವನ್ನು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್ ಶ್ರೀನಿವಾಸರವರು ತಾಲ್ಲೂಕು ಕ್ರೀಡಾಂಗಣದಲ್ಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು  ಭಾರತ ಸೇವಾದಳ ಸಂಸ್ಥೆಗೆ ನೂರು ವರ್ಷಗಳು ತುಂಬಿದ್ದು ಹೊಸದುರ್ಗ ತಾಲೂಕಿನ  ಶಾಲೆಗಳಲ್ಲಿ ಕನಿಷ್ಠ ನೂರು ಶಾಖೆಗಳನ್ನು ಮಾಡುವ ಮೂಲಕ ಶತಮಾನೋತ್ಸವ ಸಂಭ್ರಮಕ್ಕೆ ಹೊಸದುರ್ಗದ ವಿಶೇಷ ಕೊಡುಗೆಯನ್ನು ನೀಡೋಣ ಎಂದು  ಶಿಕ್ಷಕರಿಗೆ ಕರೆ ನೀಡಿದರು.  ಸಮಿತಿಯ ಉಪಾಧ್ಯಕ್ಷರಾದ ಆಗ್ರೋ ಶಿವಣ್ಣ ಮಾತನಾಡಿ ಸೇವಾದಳ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಸ್ಥೆಯಾಗಿದ್ದು  25 ವರ್ಷಗಳ ಹಿಂದೆ ರಾಷ್ಟ್ರೀಯ ಹಬ್ಬಗಳನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿತ್ತು, ಇತ್ತೀಚಿನ ದಿನಗಳಲ್ಲಿ   ರಾಷ್ಟ್ರೀಯ ಹಬ್ಬದ ಸಂತೋಷ ಸಡಗರ ಮಾಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ವಲಯ ಸಂಘಟಕರದ  ಅಣ್ಣಯ್ಯ ಪ್ರಸ್ತಾವಿಕವಾಗಿ ಮಾತನಾಡಿ  ಜೂನ್ ಮಾಹೆಯಿಂದ ಮಾರ್ಚ ಮಾಹೆವರೆಗೆ ಶಾಲೆಗಳಲ್ಲಿ ನಡೆಸಬಹುದಾದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.  ಶಾಲೆಗೊಂದು ಸೇವಾದಳ ಆಗಬೇಕು ಎಂದು ತಿಳಿಸಿದರು.  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಎಂ ಆರ್ ಸಿ. ಮೂರ್ತಿರವರು ಮಾತನಾಡಿ ಈ ವರ್ಷ ಹೊಸದುರ್ಗದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ನಿವೃತ್ತ ರಾಜ್ಯ ಸಂಪನ್ಮೂಲ ಶಿಕ್ಷಕರಾದ ಟಿ.ಎಸ್ ಕುಮಾರಸ್ವಾಮಿ ರವರನ್ನು  ಸನ್ಮಾನಿಸಲಾಯಿತು.  ವೇದಿಕೆಯಲ್ಲಿ ಖಜಾಂಚಿ ಬಸವರಾಜ್  ಸಂಘದ ಪದಾಧಿಕಾರಿಗಳು  ಉಪಸ್ಥಿತರಿದ್ದರು. ಅಧಿನಾಯಕ ಮಹಾಂತೇಶ್  ಸ್ವಾಗತಿಸಿದರು ಕಾರ್ಯದರ್ಶಿ ರಾಜಪ್ಪ ನಿರೂಪಿಸಿದರು ದಾನೇಶ್  ವಂದಿಸಿದರು.