ತೆರಿಗೆಯ ನೀತಿ ನಿಯಮಗಳ ತಿಳುವಳಿಕೆ ಇರಲಿ; ಕೆ.ಮಹೇಶ್ವರಪ್ಪ ಸಲಹೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.3: ದೇಶದಲ್ಲಿ ಸಹಕಾರ ಚಳುವಳಿ ಬೆಳೆಯುತ್ತಿದೆ. ಇದೇ ಅವಧಿಯಲ್ಲಿ ಗುಣಮಟ್ಟ ಕೂಡ ಕುಸಿತವಾಗುತ್ತಿರುವುದು ವಿಷಾಧನೀಯ ಎಂದು ಜಿಲ್ಲಾ ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ಕೆ.ಮಹೇಶ್ವರಪ್ಪ ಹೇಳಿದರು.ನಗರದ ಜನತಾ ಬಜಾರ್ ಆವರಣದಲ್ಲಿಂದು ರಾಜ್ಯ ಸಹಕಾರ ಮಹಾಮಂಡಳ,  ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ ಸೇರಿದಂತೆ ವಿವಿಧ ಸಹಕಾರ ನಿಯಮಿತದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದಾವಣಗೆರೆ, ಚನ್ನಗಿರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿಹಕರಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಕಾಲ ಕಾಲಕ್ಕೆ ಬದಲಾಗುತ್ತಿರುವ ಆದಾಯ ತೆರಿಗೆಯ ನೀತಿ ನಿಯಮಗಳ ಕುರಿತು ತಿಳುವಳಿಕೆ ಹೊಂದುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಉಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಎಸ್ ಬಿ ಶಿವಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಜಿಎಸ್ ಸುರೇಂದ್ರ ಉಪಸ್ಥಿತರಿದ್ದರು. ಸನ್ನದು ಲೆಕ್ಕಪರಿಶೋಧಕ ಉಮೇಶ್ ಶೆಟ್ಟಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನ್ವಯವಾಗುವ ಆದಾಯ ತೆರಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತು ಉಪನ್ಯಾಸ ನೀಡಿದರು.