ಮನೆಯಲ್ಲಿ ಕಳ್ಳತನ : ಮೂವರು ಆರೋಪಿಗಳ ಬಂಧನ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು.3: ಶಿವಮೊಗ್ಗ ಬಾಪೂಜಿನಗರದ ಮಹಿಳೆಯೊಬ್ಬರ ವಾಸದ ಮನೆಯಲ್ಲಿ ಬಂಗಾರದ ಆಭರಣಗಳು ಮತ್ತು ಹಣವನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ  ಸಂಬಂಧಿಸಿದಂತೆ  ಪೊಲೀಸರು  ಮೂವರು ಯುವಕರನ್ನು ಬಂಧಿಸಿ ಅವರಿಂದ ಕಳುವಾದ ವಸ್ತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಚಿಕ್ಕಲ್‌ನ ಮೊಹಮ್ಮದ್ ರಫೀಕ್ ಅಲಿಯಾಸ್  ಕಾಣ (೨೪), ಬಾಪೂಜಿನಗರದ ಅತಾವುಲ್ಲಾ (೨೯) ಮತ್ತು  ರೂಮನ್ ಖುರೇಶಿ, (೨೦)  ಇವರನ್ನು ದಸ್ತಗಿರಿ ಮಾಡಿ  ಆರೋಪಿತರಿಂದ  ಪ್ರಕರಣಕ್ಕೆ ಸಂಬಂಧಿಸಿದ   ಅಂದಾಜು ಮಾಲ್ಯ ೧೫,೪೦,೫೦೦  ರೂಗಳ ೨೩೭ ಗ್ರಾಂ ಬಂಗಾರದ ಒಡವೆಗಳು ಮತ್ತು ಕೃತ್ಯಕ್ಕೆ  ಬಳಸಿದ ಅಂದಾಜು ಮೌಲ್ಯ ೫೦,೦೦೦  ರೂ ಮೌಲ್ಯದ ಬೈಕ್   ಸೇರಿ ಒಟ್ಟು ೧೫,೯೦,೫೦೦ ರೂ ಗಳ  ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.ಜೂನ್ ೨೯ರಂದು ರಾತ್ರಿ ಈ ಕಳ್ಳತನ ನಡೆದಿತ್ತು.  ಸುಮಾರು ೨೩೪ ಗ್ರಾಂ ತೂಕದ ಚಿನ್ನ ಮತ್ತು ಹಣ ಕಳ್ಳತನ ಮಾಡಲಾಗಿತ್ತು.   ಮಹಿಳೆಯು ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಗುನ್ನೆ ಸಂಖ್ಯೆ ೦೧೧೦/೨೦೨೪ ಕಲಂ ೪೫೭, ೩೮೦ ಐಪಿಸಿ* ರೀತ್ಯ ಪ್ರಕರಣವನ್ನು ದಾಖಲಿಸಿ  ಕೊಳ್ಳಲಾಗಿರುತ್ತದೆ.   ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಕೋಟೆ ಪಿಐ ಗುರುಬಸವರಾಜ್ ನೇತೃತ್ವದಲ್ಲಿ ಪಿ.ಎಸ್.ಐ  ಕುಮಾರ್, ಸಿ.ಆರ್.ಕೊಪ್ಪದ್ ತಂಡ ರಚಿಸಲಾಗಿತ್ತು. ತನಿಖಾ ತಂಡವು   ಆರೋಪಿತರನ್ನು ಪತ್ತೆ ಮಾಡಿ ಬಂಧಿಸಿದೆ.
