ತಾಲೂಕು ಕಚೇರಿಯ ಚುನಾವಣಾ ಶಾಖೆಯಕನಕರಾಜ್ ಹೃದಯಾಘಾತಕ್ಕೊಳಗಾಗಿ ನಿಧನ
ಪುತ್ತೂರು : ಪುತ್ತೂರು ತಾಲ್ಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಕನಕರಾಜ್ (೫೧ ) ಅವರು ಹೃದಯಾಘಾತಕ್ಕೊಳಗಾಗಿ ಬುಧವಾರ ರಾತ್ರಿ ನಿಧನರಾದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನಿವಾಸಿಯಾಗಿದ್ದ ಅವರು ಪುತ್ತೂರು ನಗರದ ಹೊರವಲಯದ ಸಾಮೆತ್ತಡ್ಕದಲ್ಲಿರುವ ಸರ್ಕಾರಿ ನೌಕರರ ವಸತಿಗೃಹದಲ್ಲಿ ವಾಸ್ತವ್ಯವಿದ್ದರು. ಬುಧವಾರ ರಾತ್ರಿ ೧೧ ಗಂಟೆಯ ವೇಳೆಗೆ ಕನಕರಾಜ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಅವರು ಆಸ್ಪತ್ರೆ ತಲುಪುವ ಮುನ್ನವೇ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.
ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಈ ಹಿಂದೆ ಗ್ರಾಮಾಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕನಕರಾಜ್ ಅವರು ಪ್ರಥಮ ದರ್ಜೆ ಸಹಾಯಕರಾಗಿ ಪದೋನ್ನತಿ ಹೊಂದಿದ ಬಳಿಕ ಪುತ್ತೂರು ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಮಾಣಿಕ ಅಧಿಕಾರಿಯಾಗಿ ಅವರು ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.