ದಸರಾ ಮುಗಿದ ಬಳಿಕ ಮುಡಾ ಪ್ರಾಧಿಕಾರದ ಸಭೆ
ಸಂಜೆವಾಣಿ ನ್ಯೂಸ್
ಮೈಸೂರು.ಸೆ.27:- ಮೈಸೂರು ದಸರಾ ಮಹೋತ್ಸವ ಮುಗಿದ ನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಗುರುವಾರ ಮುಡಾ ಆವರಣದಲ್ಲಿ ಮುಡಾ ಆಯುಕ್ತರು ಹಾಗೂ ಎಲ್ಲಾ ಕಾಖಾ ಮುಖ್ಯಸ್ಥರೊಡನೆ ಸಭೆಯನ್ನು ನಡೆಸಿದರು. ಈ ವೇಳೆಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕುರಿತು ರಾಜ್ಯದಲ್ಲಿನ ಸುದ್ದಿವಾಹಿನಿಗಳಲ್ಲಿ ದಿನಂಪ್ರತಿ ಮಾಧ್ಯಮಗಳಲ್ಲಿ ವ್ಯತಿರಿಕ್ತವಾಗಿ ಬಿಂಬಿಸುತ್ತಿರುವುದನ್ನು ಬೇಸರದ ಸಂಗತಿಯಾಗಿದೆ.
ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಪ್ರಾಧಿಕಾರದ ಹಿತಾಸಕ್ತಿ ಹಾಗೂ ಗೌಪ್ಯತೆಯನ್ನು ಕಾಪಾಡಿಕೊಂಡು ಕಾರ್ಯ ನಿರ್ವಹಿಸಲು ಸೂಚಿಸಿಲಾಯಿತು. ದಸರಾ ಮಹೋತ್ಸವ ಕಳೆದ ನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದ್ದು, ಅದರಂತೆ ಪ್ರಾಧಿಕಾರದ ಎಲ್ಲಾ ಅಧಿಕಾರಿಗಳಿಗೆ ಸಾಮಾನ್ಯ ಸಭೆಗೆ ಮಂಡಿಸಲಾಗುವ ವಿಷಯಗಳನ್ನು ಪೂರ್ಣ ಮಾಹಿತಿಯೊಡನೆ ಸಲ್ಲಿಸಲು ಸೂಚಿಸಲಾಯಿತೆಂದರು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಕೆಲಸ ಕಾರ್ಯಗಳ ನಿಮಿತ್ತ ಸಾರ್ವಜನಿಕರು ಬೆಳಗಿನಿಂದ ಸಂಜೆಯವರೆಗೆ ಪ್ರಾಧಿಕಾರದಲ್ಲಿ ಕಾರಿಡಾರ್‍ಗಳಲ್ಲಿ ಕಾಯುತ್ತಿರುವುದನ್ನು ಗಮನಿಸಲಾಗಿದ್ದು, ವಿಷಯವಾರು ಕಡತ ನಿರ್ವಹಣೆ ಆಗಬೇಕಿದೆ.ಇದಕ್ಕಾಗಿ ಮಧ್ಯಾಹ್ನ 3 ರಿಂದ 5-30ರ ಸಮಯದಲ್ಲಿ ಅಧಿಕಾರಿಗಳು/ನೌಕರರು ಸಾರ್ವಜನಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸೂಚಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸುವ ಅರ್ಜಿಗಳಿಗಾಗಿ ಪ್ರತ್ಯೇಕ ಕೌಂಟನ್ರ್ನು ತೆರೆಯಲಾಗಿದ್ದು, ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಹಿಂದೆ ಹಂಚಿಕೆಯಾಗಿರುವ ನಾಗರೀಕ ಸೌಕರ್ಯ ನಿವೇಶನಗಳನ್ನು ಹಂಚಿಕೆಯಾದ ಉದ್ದೇಶಕ್ಕೆ ಬಳಸದೇ ನಿಯಮ ಉಲ್ಲಂಘಿಸಿ ಮಳಿಗೆಗಳನ್ನು ನಿರ್ಮಿಸಿ ನಾಡಿಗೆ ನೀಡಿರುವ ಬಗ್ಗೆ ಅನೇಕ ದೂರುಗಳು ಬಂದಿರುವುದನ್ನು ಗಂಭಿರವಾಗಿ ಪರಿಗಣಿಸಿದೆ. ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಾಗರೀಕ ಸೌಲಭ್ಯ ನಿವೇಶನಗಳ ವಿವರಗಳ ಈ ಕೆಳಕಂಡಂತೆ ಪರಿಶೀಲಿಸಿ ವರದಿ ನೀಡಲು ಸೂಚಿಸಿದರು. ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿರುವ ವಿವರ, ನ್ಯಾಯಾಲಯದಲ್ಲಿ ನಾಗರೀಕ ಸೌಕರ್ಯ ನಿವೇಶನ ಸಂಬಂಧಿಸಿದಂತೆ ಪ್ರಕರಣಗಳ ವಿವರ ಇತ್ಯಾದಿಗಳ ಮಾಹಿತಿ ನೀಡುವಂತೆ ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಾಂತರ ಬೆಲೆ ಬಾಳುವ ನಿವೇಶನ/ ಆಸ್ತಿಗಳನ್ನು ಅನಧಿಕೃತವಾಗಿ ಒತ್ತುವರಿಯಾಗಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದು, ಇವುಗಳನ್ನು ಕೂಡಲೇ ಪತ್ತೆ ಹಚ್ಚುವುದು. ಭೂಸ್ವಾಧೀನ ಅಧಿಕಾರಿಗಳು ಖಾಲಿ ಇರುವ ಪ್ರಾಧಿಕಾರದ ಜಮೀನು / ಆಸ್ತಿಗಳನ್ನು ನಿಖರವಾಗಿ ಸರ್ವೆ ಮಾಡಿಸಿ, ಒತ್ತುವರಿಯಾಗಿದ್ದಲ್ಲಿ ಮುಲಾಜಿಸಲ್ಲದೇ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಹೇಳಿದರು.
ಪ್ರಾಧಿಕಾರದ ಜಮೀನು/ ಆಸ್ತಿಗಳನ್ನು ಸಂರಕ್ಷಿಸಲು ತಂತಿಬೇಲಿ ಅಳವಡಿಸಿ ಪ್ರಾಧಿಕಾರದ ಅಸ್ತಿಯೆಂದು ಕಡ್ಡಾಯವಾಗಿ ನಾಮಫಲಕ ಆಳವಡಿಸಲು ಸೂಚಿಸಲಾಯಿತು. ಹಂಚಿಕೆಯಾಗಿರುವ ನಾಗರೀಕ ಸೌಕರ್ಯ ನಿವೇಶನಗಳ ವಾರ್ಷಿಕ ಗುತ್ತಿಗೆ ಹಣ ಮತ್ತು ತೆರಿಗೆಗಳನ್ನು ಸಂಗ್ರಹಿಸಲು ಅಗತ್ಯ ಕ್ರಮವಹಿಸಲು ಹಾಜರಿದ್ದ ಅಧಿಕಾರಿಗಳಿಗೆ ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಬಡಾವಣೆಗಳನ್ನು ಕೈಗೆತ್ತಿಗೊಳ್ಳಲು ಈ ಹಿಂದೆಯು ಸೂಚಿಸಲಾಗಿದ್ದು, ಪ್ರಾಧಿಕಾರದ ಮುಖ್ಯ ಆದ್ಯತೆಯಂತೆ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡಲು ಅನುವಾಗುವಂತೆ ಈ ಹಿಂದೆ ರೈತರ ಸಹಭಾಗಿತ್ವದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಬಲ್ಲಹಳ್ಳಿ ಹಾಗೂ ಬೊಮ್ಮೇನಹಳ್ಳಿ ಬಡಾವಣೆಯನ್ನು ತ್ವರಿತವಾಗಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವಿವರಗಳನ್ನು ನೀಡಲು ತಿಳಿಸುತ್ತಾ, ಗುಂಪು ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸೂಚಿಸಿದರು.