ಅಜೀಂ ಪ್ರೇಮ್‌ಜಿಗೆ ಶಾಸಕ ಇಕ್ಬಾಲ್ ಹುಸೇನ್ ಅಭಿನಂದನೆ
ರಾಮನಗರ,ಸೆ.೨೭- ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮೊಟ್ಟೆ, ಬಾಳೆಹಣ್ಣು ಉಚಿತವಾಗಿ ವಿತರಿಸಲು ಅಜೀಂ ಪ್ರೇಮ್‌ಜಿ ಅವರು ರಾಜ್ಯದ ೫೫ ಲಕ್ಷ ಮಕ್ಕಳಿಗೆ ೧೫೦೦ ಕೋಟಿ ರೂ.ಗಳನ್ನು ವ್ಯಯಿಸಿರುವ ಕಾರ್ಯಕ್ಕೆ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ಅಭಿನಂದನೆ ಸಲ್ಲಿಸಿದರು.
ನಗರದ ಮಹಿಳಾ ಪದವಿಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ)ನಲ್ಲಿ ಆಯೋಜಿಸಿದ್ದ ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ ೬ ದಿನಗಳು ಪೂರಕ ಪೌಷ್ಟಿಕಾಂಶ ಅಹಾರವನ್ನು ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟ, ಹಾಲು ಜೊತೆಗೆ ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪೌಷ್ಟಿಕ ಆಹಾರವಾಗಿ ಜಿಲ್ಲೆಯ ೬೬.೨೧೦ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೫೫ ಲಕ್ಷ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಿಸುವ ಕೆಲಸಕ್ಕೆ ಸರ್ಕಾರ ಇಂದು ರಾಜ್ಯಾಧ್ಯಂತ ಚಾಲನೆ ನೀಡಿದೆ ಎಂದರು.
ಸರ್ಕಾರ ವಿದ್ಯಾರ್ಥಿಗಳಿಗೆ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಸರ್ವತೋಮುಖ ಬೆಳವಣಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದ ಅವರು ವಿದ್ಯಾರ್ಥಿಗಳಲ್ಲಿ ಆರೋಗ್ಯಕರವಾದ ಮನಸ್ಸು ಇದ್ದಾಗ ಮಾತ್ರ ನೀವು ಜ್ಞಾನವಂತರಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಎಲ್ಲರೂ ಎಲ್ಲ ಸಮಯದಲ್ಲೂ ವಿದ್ಯಾರ್ಥಿಗಳು ಆಗಲು ಸಾಧ್ಯವಿಲ್ಲ. ನಿಮಗೆ ಸಿಕ್ಕಿರುವ ಸುವರ್ಣ ಸಮಯದಲ್ಲಿ ನೀವೆಲ್ಲರೂ ಉತ್ತಮ ಶಿಕ್ಷಣ ಪಡೆದು ಜ್ಞಾನವಂತರಾಗಿ ಉತ್ತಮ ಫಲಿತಾಂಶ ತರಬೇಕು. ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ವೇಳೆ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ೨ನೇ ಸ್ಥಾನ ಪಡೆದುಕೊಂಡಿತ್ತು. ಆದರೆ, ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ೨೬ನೇ ಸ್ಥಾನ ಪಡೆದು ಕೊಂಡಿದೆ.
ಹಾಗಾಗಿ ವಿದ್ಯಾರ್ಥಿಗಳು ಈ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಶಿಕ್ಷಕರು ಮತ್ತು ಪೋಷಕರಿಗೆ ಕೀರ್ತಿ ತನ್ನಿ ಎಂದು ಹೇಳಿದರು.
ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಬಸವರಾಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ಜಿಲ್ಲಾ ಕ್ಷರ ದಾಸೋಹ ಶಿಕ್ಷಣಾಧಿಕಾರಿ ರಾಜಶೇಖರ, ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್, ಪ್ರಭಾರ ಮುಖ್ಯ ಶಿಕ್ಷಕ ಶಿವಸ್ವಾಮಿ, ಸಿಆರ್‌ಪಿಗಳಾದ ಮುನಿಯಪ್ಪ, ನಾಗರತ್ನ ಭಾಗವಹಿಸಿದ್ದರು.