ಎಸ್.ಕೆ.ರಾಜೂಗೌಡರಿಗೆ ಒಲಿದ ಸೇವಾ ಭೂಷಣ ಪ್ರಶಸ್ತಿ
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಸೆ.27-ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ (ರಿ) ಮೈಸೂರು ಇವರು 13 ನೇ ವಾರ್ಷಿಕೋತ್ಸವದ ಪ್ರಯುಕ್ತ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮೀಸಲಾತಿ ಜಾರಿಗೆ ತಂದು 105 ವರ್ಷವಾದ ಸಂಭ್ರಮಾಚರಣೆಯ ಅಂಗವಾಗಿ ನಡೆಯುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ “ಸೇವಾ ಭೂಷಣ” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಿನಾಂಕ:28.09.2024, ಶನಿವಾರ ಮಧ್ಯಾಹ್ನ 2:30ಕ್ಕೆ ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಇವರು ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ ಸೇವಾ ಭೂಷಣ ಪ್ರಶಸ್ತಿಗೆ ವಿಶ್ವಮಾನವ ಸೇವಾ ಸಂಸ್ಥೆಯ ಅಧ್ಯಕ್ಷರು, ಸಾಮಾಜಿಕ ಚಿಂತಕರು ಆದ ಎಸ್.ಕೆ.ರಾಜೂಗೌಡ ರವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ವೇದಿಕೆಯ ರಾಜ್ಯಾಧ್ಯಕ್ಷರಾದ ಎಚ್.ಎಲ್.ಯಮುನಾ ರವರು ತಿಳಿಸಿದ್ದಾರೆ.
ಎಸ್.ಕೆ.ರಾಜೂಗೌಡರವರು ಕಳೆದ 15 ವರ್ಷಗಳಿಂದ ತಾಲ್ಲೂಕು , ಜಿಲ್ಲಾ , ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ಸಕ್ರಿಯವಾಗಿ ಕನ್ನಡಪರ,ರೈತಪರ, ಶೋಷಿತರಪರ, ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ನಡೆದ ಹೋರಾಟ ಮತ್ತು ಕಾವೇರಿ ಹೋರಾಟ ಸೇರಿದಂತೆ ಸಾಮಾಜಿಕ, ಸಾಂಸ್ಕೃತಿಕ, ವೈಚಾರಿಕ ಮತ್ತು ವೈಜ್ಞಾನಿಕ,ಜನಪರ, ಸಂವಾದ ಮತ್ತು ಹೋರಾಟಗಳಲ್ಲಿ ಹಾಗೂ ವೈಜ್ಞಾನಿಕ ಮತ್ತು ವೈಚಾರಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಬುದ್ಧ,ಬಸವಣ್ಣ,ಅಂಬೇಡ್ಕರ್, ಕುವೆಂಪು ವಿಚಾರಧಾರೆಗಳ ಪ್ರಚಾರ ಮತ್ತು ಅನುಷ್ಠಾನಕ್ಕಾಗಿ ವಿಶ್ವಮಾನವ ಸೇವಾ ಸಂಸ್ಥೆ ಮತ್ತು ಬುದ್ಧ ಲಿವಿಂಗ್ ಸೆಂಟರ್ ನ್ನು ಸ್ಥಾಪಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ತಾಲ್ಲೂಕು ಆಡಳಿತ ಗೌರವಿಸಿದೆ.