ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ವೈದ್ಯರ ಪಾತ್ರ ಅನನ್ಯ; ಜಿಲ್ಲಾಧಿಕಾರಿ ಟಿ. ಭೂಬಾಲನ್
ವಿಜಯಪುರ,ಜು.3:ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.
ಭಾರತೀಯ ವೈದ್ಯಕೀಯ ಸಂಘÀದ ವತಿಯಿಂದ ಸ್ಟೇಷನ್ ರಸ್ತೆಯಲ್ಲಿರುವ ಭಾರತೀಯ ವೈದ್ಯಕೀಯ ಸಂಘದ ಸಭಾ ಭವನದಲ್ಲಿ ಆಯೋಜಿಸಿದ ರಾಷ್ಟ್ರೀಯ ವೈದ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈದ್ಯರು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಿಕ್ಕೆ ಖಾಸಗಿ ವೈದ್ಯರು, ಭಾರತೀಯ ವೈದ್ಯಕೀಯ ಸಂಘ ನಿರಂತರವಗಿ ಸರಕಾರಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.
ಹೆಣ್ಣು ಭ್ರೂಣ ಹತ್ಯೆಯಂತಹ ಸಮಾಜವಿರೋಧಿ ಪಿಡುಗುಗಳನ್ನು ಬೇರು ಸಹಿತ ಕಿತ್ತೆಸೆಯಲು ಕಾನೂನಿನ ಜೊತೆ ಜೊತೆಗೇ ವೈದ್ಯರ ಇಚ್ಚಾಶಕ್ತಿ ಹಾಗೂ ಸಹಕಾರ ಅತೀ ಮುಖ್ಯವಾಗಿದೆ ಎಂದರು.
ಬಿಎಲ್‍ಡಿಇ ಡೀಮ್ಡ್ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಆರ್.ಎಸ್. ಮುಧೋಳ ಅತಿಥಿಗಳಾಗಿ ಮಾತನಾಡಿ, ವೈದ್ಯರು ನಿರಂತರ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಆಗುಹೋಗುಗಳನ್ನು ಪರಸ್ಪರ ಚರ್ಚಿಸಿ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ರವಿಕುಮಾರ ಬಿರಾದಾರ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ ಪ್ರತಿಯೊಬ್ಬ ವೈದ್ಯರ ನೆರವಿಗಿದ್ದು ಸರಕಾರ ಹಾಗೂ ವೈದ್ಯರ ನಡುವೆ ಕೊಂಡಿಯಾಗಿ ಕೆಲಸ ಮಾಡಿ ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಎಲ್ಲಾ ವೈದ್ಯರು ಸರಕಾರದ ಎಲ್ಲಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಹೆಣ್ಣು ಭ್ರೂಣ ಹತ್ಯೆಯಂತಹ ಪಿಡುಗನ್ನು ವಿಜಯಪುರ ಜಿಲ್ಲೆಯಿಂದ ನಿರ್ನಾಮ ಮಾಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಎಲ್‍ಡಿಇ ಡೀಮ್ಡ್ ವಿಶ್ವ ವಿದ್ಯಾಲಯದ ಸಮ ಉಪ ಕುಲಪತಿ ಡಾ. ಅರುಣ ಇನಾಮದಾರ, ಬಿಎಲ್‍ಡಿಇ ವೈದ್ಯಕೀಯ ಕಾಲೇಜಿನ ಡೀನ್ ಡಾ. ತೇಜಶ್ವಿನಿ ವಲ್ಲಭ, ಚಿಕ್ಕ ಮಕ್ಕಳ ತಜ್ಞ ಡಾ. ಅನಿಲ್ ನಾವದಗಿ, ಇತ್ತೀಚೆಗೆ ಸುದೀರ್ಘ ಸರಕಾರಿ ಸೇವೆ ಸಲ್ಲಿಸಿ ನಿವೃತ್ತಿಯಾದ ಡಾ. ಜೈಬುನ್ನಿಸಾ ಬೀಳಗಿ ಹಾಗೂ ಡಾ. ವಿಜಯಾ ಬಿರಾದಾರ ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ವೈದ್ಯರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ವೈದ್ಯರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.
ವೇದಿಕೆಯ ಮೇಲೆ ಅಲ್- ಅಮಿನ್ ಮೆಡಿಕಲ್ ಕಾಲೇಜ್‍ನ ನಿರ್ದೇಶಕ ಡಾ. ಬಿ.ಎಸ್ ಪಾಟೀಲ, ಜೆಎಸ್‍ಎಸ್ ಆಸ್ಪತ್ರೆಯ ನರರೋಗ ತಜ್ಞ ಡಾ ಮಯೂರ ಕಾಕು ಇದ್ದರು.
ಡಾ. ಆನಂದ ಪಾಟೀಲ ಸ್ವಾಗತಿಸಿದರು. ಡಾ. ದಯಾನಂದ ಬಿರಾದಾರ ವಂದಿಸಿದರು.