ವಚನಗಳು ಮಾನವನ ಜೀವನಕ್ಕೆ ಸಂಜೀವಿನಿ ಇದ್ದಂತೆ: ಸಾಹಿತಿ ಬೋರಮ್ಮ ಪತಂಗಿ
ಕೊಲ್ಹಾರ:ಜು.3: ವಚನಗಳು ಮಾನವನ ಜೀವನಕ್ಕೆ ಸಂಜೀವಿನಿ ಇದ್ದಂತೆ. ವಚನಗಳ ಸಂಗ್ರಹಕ್ಕಾಗಿ ಫ.ಗು ಹಳಕಟ್ಟಿಯವರು ತಮ್ಮ ಜೀವನದ ಬಹುಕಾಲ ಸಮಯವನ್ನೇ ಮೀಸಲಿಟ್ಟಿದ್ದರು ಎಂದು ಸಾಹಿತಿ ಬೋರಮ್ಮ ಪತಂಗಿ ಹೇಳಿದರು.
ವಚನಪಿತಾಮಹ ಡಾ.ಫ.ಗು ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ತಾಲೂಕ ಆಡಳಿತ ಮಂಡಳಿ ನೇತೃತ್ವದಲ್ಲಿ ಪಟ್ಟಣದ ತಾಲೂಕು ಪಂಚಾಯತ ಸಬಾ ಭವನದಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ನ್ಯಾಯವಾದಿಗಳಾಗಿ, ಸಿದ್ದೇಶ್ವರ ಬ್ಯಾಂಕಿನ ಸ್ಥಾಪಕರಾಗಿ, ರಾಜಕೀಯ ಧುರೀಣರಾಗಿ ಸಮಾಜಕ್ಕೆ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಮಹಾನ್ ಚೇತನ ಎಂದರು.
ಫ.ಗು ಹಳಕಟ್ಟಿಯವರ ಕುರಿತು ಪ.ಗು ಹಳಕಟ್ಟಿ ಸಂಶೋಧನೆಯ ಶರಣ, ಆಗ ಇದ್ದಿರಿ ನೀವಿನ್ನೂ ತರುಣ. ನಿಮ್ಮಲ್ಲಿದೆ ಜ್ಞಾನದ ಹೂರಣ. ನಿಮ್ಮ ಮೇಲಿದೆ ಶಿವನ ಕರುಣ. ಕಾಯಕವೇ ನಿಮಗೆ ಆಭರಣ. ಆರಾಧಿಸಿದರು ನಿಮ್ಮನ್ನು ಎಲ್ಲಗಣ. ಕಷ್ಟಗಳೇ ನಿಮಗೆ ಸುಂದರ ತಾಣ. ಇದ್ದಿರಿ ನೀವು ಆಗ ಬಲು ಜಾಣ. ನಿಮಗಿರಲಿಲ್ಲ ದುಡ್ಡಿನ ಝಣ ಝಣ. ನಿಮ್ಮ ಸಂಗ್ರಹವೇ ವಚನಗಳ ಉಳುವಿಗೆ ಕಾರಣ ಎಂದು ಸ್ವರಚಿತ ಚುಟುಕು ಹೇಳಿದರು.
ನ್ಯಾಯವಾದಿ, ಯುವ ಸಾಹಿತಿ ಮಹಮ್ಮದಗೌಸ್ ಹವಾಲ್ದಾರ್ ಮಾತನಾಡಿ.ಬಸವಾದಿ ಶರಣರ ವಚನಗಳನ್ನು ಅಮೂಲಾಗ್ರವಾಗಿ ಸಂಗ್ರಹಿಸಿ ಜನ ಸಾಮಾನ್ಯರಿಗೆ ವಚನದ ಸಾರವನ್ನು ಉಣಬಡಿಸಿದ ಫ.ಗು ಹಳಕಟ್ಟಿ ಸಮತಾ ಸಮಾಜದ ನಿರ್ಮಾತೃ ಎಂದರು.ಮಾನವ ಅಸ್ಮಿತೆಯ ಗೌರವವನ್ನು ಎತ್ತಿ ಹಿಡಿದ ಸಾಹಿತ್ಯ ವಚನ ಸಾಹಿತ್ಯವು ಮಾನವನಿಗೆ ಮೇಲು, ಕೀಳು, ಉಚ್ಚ, ನೀಚ, ಬಡವ ಬಲ್ಲಿದ ಎಂಬ ತಾರತಮ್ಯಗಳನ್ನು ತೊಡೆದುಹಾಕಿ ಸಮಾನತೆಯ ತತ್ವ ಪ್ರತಿಪಾದನೆಯ ಪ್ರಜ್ವಲ ದೀಪಗಳಾಗಿವೆ ಎಂದರು.
ತಹಸೀಲ್ದಾರ ಎಸ್.ಎಸ್ ನಾಯಕಲಮಠ,
ಸಾಹಿತಿ ರುದ್ರಮ್ಮ ಗಿಡ್ಡಪ್ಪಗೋಳ, ಜಗದೀಶ ಸಾಲಳ್ಳಿ ಮಾತನಾಡಿದರು.
ಕಸಾಪ ತಾಲೂಕ ಅಧ್ಯಕ್ಷ ಅಶೋಕ ಆಸಂಗಿ ಸ್ವಾಗತಿಸಿದರು, ಶಿಕ್ಷಕ ಕೆ.ಎಸ್ ಬಾಲಗೊಂಡ ನಿರೂಪಿಸಿದರು.
ಪಟ್ಟಣದ ಪ್ರಮುಖರು, ಪ.ಪಂ ಸದಸ್ಯರು, ಶಾಲಾ ಮಕ್ಕಳು ಸಹಿತ ಅನೇಕರು ಉಪಸ್ಥಿತರಿದ್ದರು.