ಎಲ್ಲ ವೃತ್ತಿಗಳಲ್ಲಿ ವೈದ್ಯವೃತ್ತಿ ಪರಮೊಚ್ಚವಾದುದು:ಸಂದೀಪ ಪಾಟೀಲ
ವಿಜಯಪುರ,ಜು.3:’ವೈದ್ಯೋ ನಾರಾಯಣ ಹರಿ’ ಎಂಬಂತೆ ವೈದ್ಯರು ಪ್ರತಿಯೊಬ್ಬರ ಜೀವವನ್ನು ಕಾಪಾಡುವ ದೇವರಂತೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಸಂದೀಪ ಪಾಟೀಲ ಹೇಳಿದರು.
ನಗರದ ರೋಟರಿ ಸಂಸ್ಥೆಯಲ್ಲಿ ಹಮ್ಮಿಕೊಂಡ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ವೈದ್ಯ ವೃತ್ತಿ ಎಲ್ಲ ವೃತ್ತಿಗಳಲ್ಲಿ ಪವಿತ್ರವಾದುದು, ವೈದ್ಯರು ಜೀವರಕ್ಷಕರು. ಪ್ರತಿಯೊಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಂದಿಲೊಂದು ಕಾಯಿಲೆಗೆ ತುತ್ತಾಗುತ್ತಾನೆ. ಆದರೆ ವೈದ್ಯರು ಅತ್ಯಂತ ಸಂಯಮದಿಂದ ಪ್ರೀತಿಯಿಂದ ಆರೈಕೆ ಮಾಡುತ್ತಾರೆ. ಕೆಲ ವೈದ್ಯರ ಕೈಗುಣ ಹೇಗಿರುತ್ತದೆಂದರೆ ರೋಗಿಯನ್ನು ಮುಟ್ಟಿದ ತಕ್ಷಣ ಅರ್ಧ ಆರಾಮವಾಗುತ್ತದೆ. ವೈದ್ಯರನ್ನು ಈ ದಿನದಂದು ಸನ್ಮಾನಿಸಿದಲ್ಲಿ ಅವರಿಗೆ ಉತ್ತೇಜನ ನೀಡಿ ಅವರ ಕಾರ್ಯಕ್ಷಮತೆ ಹೆಚ್ಚಿಸಿದಂತಾಗುತ್ತದೆ ಎಂದರು.
ರೋಟರಿ ಸಂಸ್ಥೆಯ ಹಿಂದಿನ ಅಧ್ಯಕ್ಷ ಜಿ. ಎಸ್. ಕುಲಕರ್ಣಿ, ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಪ್ರತಿ ವರ್ಷ ಜುಲೈ 1 ರಂದು ಡಾ. ಬಿ. ಸಿ. ರಾಯ್ ಅವರ ಜನ್ಮದಿನವಾಗಿದ್ದು, ಈ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರೊಬ್ಬ ಶ್ರೇಷ್ಠ ವೈದ್ಯರಾಗಿದ್ದು, ತಮ್ಮ ಜೀವಿತಾವಧಿಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಅನೇಕ ಕಾಯಿಲೆಗಳನ್ನು ಗುಣಪಡಿಸಿ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಎಸ್. ಎಸ್. ನಾಗಠಾಣ, ಡಾ. ಸಂಜೀವ ಜೋಶಿ ಅವರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜೇಂದ್ರ ಜೋಶಿ, ಶಿವಾನಂದ ಗಡಶೆಟ್ಟಿ, ಎಸ್.ಬಿ. ಪಾಟೀಲ ಸೇರಿದಂತೆ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.