ಹಿಂದೂಗಳ ಕುರಿತು ರಾಹುಲ್ ಗಾಂಧಿ ಅವಹೇಳನಕಾರಿ ಹೇಳಿಕೆಗೆ ಈಶ್ವರಸಿಂಗ್ ಠಾಕೂರ ಖಂಡನೆ
ಬೀದರ್:ಜು.3: ಹಿಂದೂಗಳು ದ್ವೇಷ ಮತ್ತು ಹಿಂಸೆಯಲ್ಲಿ ತೊಡಗಿದ್ದಾರೆ ಎಂದು ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ ಗಾಂಧಿ ಹೇಳಿದ್ದು ಖಂಡನೀಯ ಎಂದು ಬಿಜೆಪಿ ವಿಭಾಗೀಯ ಪ್ರಭಾರಿಗಳು ಬೀದರ ಉತ್ತರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು ಪ್ರತಿಪಕ್ಷ ನಾಯಕ ರಾಹುಲ ಗಾಂಧಿ ಚುನಾವಣೆ ಸಂದರ್ಭದಲ್ಲಿ ಮತ ಬೇಟೆಗಾಗಿ ಹಣೆ ಮೇಲೆ ಕುಂಕುಮ ಧರಿಸಿ ಮಠ ಮಂದಿರಗಳಿಗೆ ಸುತ್ತಾಡುತ್ತಾರೆ. ಪೂಜೆ ಮಾಡುತ್ತಾರೆ. ಚುನಾವಣೆಯಲ್ಲಿ ಜನ ಕೈ ಹಿಡಿದಿಲ್ಲ ಎನ್ನುವ ದ್ವೇಷದಿಂದ ಬಹುಸಂಖ್ಯಾತ ಹಿಂದೂಗಳಿಗೆ ಹಾಗೂ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಮಾತನಾಡುತ್ತಾರೆ. ಸಂಸತ್ ನಲ್ಲಿ ಶಿವ ಹಾಗೂ ಇನ್ನುಳಿದ ಮಹಾತ್ಮರ ಭಾವಚಿತ್ರಗಳನ್ನು ಕೆಳಗೆ ಬಿಸಾಡುವ ಮೂಲಕ ಅವಮಾನ ಮಾಡುತ್ತಾರೆ. ಇದನ್ನು ಹಿಂದೂ ಸಮಾಜ ತೀವ್ರವಾಗಿ ಖಂಡಿಸುತ್ತದೆ. ರಾಹುಲ ಗಾಂಧಿ ಮಾನಸಿಕ ಸ್ಥೀಮಿತತೆ ಕಳೆದುಕೊಂಡು ಮಾತನಾಡುತ್ತಿರುವುದನ್ನು ನೋಡಿದರೆ ಅವರು ಹತಾಶರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಈಶ್ವರಸಿಂಗ್ ಠಾಕೂರ ಕಿಡಿಕಾರಿದ್ದಾರೆ. ಕೂಡಲೇ ಅವರು ಬಹುಸಂಖ್ಯಾತ ಹಿಂದೂಗಳ ಕ್ಷಮೆ ಯಾಚಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.