ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಪಣತೊಡಬೇಕು : ಅಮರೇಶ್ವರ ಶ್ರೀ
ಅಥಣಿ:ಜು.3: ಪ್ರಕೃತಿಯ ಸೌಂದರ್ಯಕ್ಕೆ ಕೊಡಲಿ ಪೆಟ್ಟು ನೀಡಿದರೆ ನಮ್ಮೆಲ್ಲರ ಬದುಕಿಗೆ ಕೊಡಲಿ ಏಟು ನೀಡಿದಂತಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ಪರಿಸರ ಸಂರಕ್ಷಣೆಯ ಜೊತೆಗೆ ಸಸಿ ನೆಡುವ ಪಣತೊಡಬೇಕಿದೆ ಎಂದು ಕವಲಗುಡ್ಡದ ಸಿದ್ದಶ್ರೀ ಆಶ್ರಮದ ಅಮರೇಶ್ವರ ಸ್ವಾಮೀಜಿ ಕರೆ ನೀಡಿದರು.
ಅವರು ಮಂಗಳವಾರ ತಾಲೂಕಿನ ಸಂಬರಗಿ ಗ್ರಾಮದಲ್ಲಿ “ಟೀಮ್ ಯೂಥ್ ಫೌಂಡೇಶನ್” ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಂಘಮಿತ್ರ ಪ್ರೌಢಶಾಲೆ ಹಾಗೂ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಪರಿಸರ ಜಾಗೃತಿಯ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ಯುಗದಲ್ಲಿ ಯುವ ಪೀಳಿಗೆ ಆಸಕ್ತಿ ಬೆಳಿಸಿಕೊಂಡು ಗಿಡಗಳನ್ನು ಬೆಳೆಸುವ ಸಂಕಲ್ಪ ತೊಡಬೇಕಾಗಿದೆ ಎಂದು ತಿಳಿಸಿದರು.
ಈ ದಿಶೆಯಲ್ಲಿ ಬದಲಾವಣೆಯ ಹೆಜ್ಜೆ ಹಾಕುತ್ತಿರುವ ಯೂಥ್ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಥಣಿ ವಲಯದ ಪ್ರಾದೇಶಿಕ ಅರಣ್ಯ ಅಧಿಕಾರಿ ಪ್ರಶಾಂತ ಗಾಣಿಗೇರ ಮಾತನಾಡಿ ಇಂದಿನ ದಿನಗಳಲ್ಲಿ ನಾವೆಲ್ಲರೂ ವಿಪರೀತವಾಗಿ ಏರಿಕೆಯಾಗುತ್ತಿರುವ ತಾಪಮಾನದ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಗಿಡಮರಗಳನ್ನು ಹೆಚ್ಚಿಗೆ ಬಳಸಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯೂತ್ ಫೌಂಡೇಶನ್ ಯುವಕರು ಗಿಡಗಳ ಸಂರಕ್ಷಣೆಗೆ ಮುಂದಾಗಿರುವುದು ಅನೇಕ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಬಯಲು ಸೀಮೆಯ ಭಾಗದಲ್ಲಿ ಹೆಚ್ಚಾಗಿ ನಾವೆಲ್ಲರೂ ಗಿಡಗಳನ್ನು ನೆಡುವ ಮೂಲಕ ಅವುಗಳ ಪಾಲನೆ ಪೆÇೀಷಣೆ ಮಾಡಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸಿ ಪರಿಸರ ಉಳಿಸಬೇಕೆಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯೂಥ್ ಫೌಂಡೇಶನ್ ವತಿಯಿಂದ ನೀಡುವ “ಆದರ್ಶ ಗ್ರಾಮಸ್ಥ” ಪ್ರಶಸ್ತಿಗೆ ಭಾಜನರಾದ ಗ್ರಾಮದ ಹಿರಿಯರಾದ ಮುರಳೀಧರ ದೇಶಪಾಂಡೆ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಶಿವಾಜಿ ಮುಂಜೆ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಾಯಕ ಬಾಗಡಿ, ಪಿಕೆಪಿಎಸ್ ಉಪಾಧ್ಯಕ್ಷ ಅಣ್ಣಾಸಾಹೇಬ ಮಿಸಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ದಳವಾಯಿ ಸೇರಿದಂತೆ ಮುಖಂಡರಾದ ಅಬ್ದುಲ್ ಮುಲ್ಲಾ, ಮಲ್ಲಿಕಾರ್ಜುನ ದಳವಾಯಿ, ಪೆÇೀಪಟ್ ನರೋಟೆ, ವಿಠ್ಠಲ ಗಸ್ತಿ, ಅಮೃತ ಮಿಸಾಳ ಹಾಗೂ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸಂಘಮಿತ್ರ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು