ಜು. 06 ರಂದು 11 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉದ್ಘಾಟನೆ
ಅಥಣಿ : ಜು.3:ಕಳೆದ 15 ವರ್ಷಗಳ ನಿರಂತರ ಅಥಣಿ ವಕೀಲರ ಹೋರಾಟದ ಮತ್ತು ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಅಥಣಿಗೆ ಜಿಲ್ಲಾ ನ್ಯಾಯಾಲಯ ಮಂಜೂರಾಗಿದ್ದು, 11 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿ ಸ್ಥಳ: ಅಥಣಿ ಇದರ ಉದ್ಘಾಟನಾ ಸಮಾರಂಭವನ್ನು ಇದೇ ಜುಲೈ 6 ರಂದು ಅಥಣಿ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಮುಂಜಾನೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ಹುಚಗೌಡರ ತಿಳಿಸಿದರು.
ಅವರು ಅಥಣಿ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಉಚ್ಚ ನ್ಯಾಯಾಲಯದ ಮತ್ತು ಬೆಳಗಾವಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಕೆ.ಎಸ್.ಮುದಗಲ್ ಜಿಲ್ಲಾ ನ್ಯಾಯಾಲಯವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸಚೀನ ಮಗದುಮ, ಕೆ.ಎಸ್.ಹೇಮಲೇಖಾ, ರಾಮಚಂದ್ರ ಹುದ್ದಾರ, ವಿಜಯಕುಮಾರ ಪಾಟೀಲ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ವಹಿಸುವರು, ವಿಶೇಷ ಆವ್ಹಾನಿತರಾಗಿ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಕು. ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಆಗಮಿಸುವರು ಮತ್ತು ಬೆಳಗಾವಿ ಜಿಲ್ಲಾ ಪ್ರಿನ್ಸಿಪಲ್ ಮತ್ತು ಸೇಶನ್ಸ್ ನ್ಯಾಯಾಧೀಶ ತ್ಯಾಗರಾಜ ಇನವಳ್ಳಿ ಚಿಕ್ಕೋಡಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸುನೀಲಕುಮಾರ ಬಳೋಲ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಹಿರಿಯ ನ್ಯಾಯವಾದಿ ಕೆ.ಎ.ವಣಜೋಳ ಮಾತನಾಡಿ 130 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಅಥಣಿ ನ್ಯಾಯಾಲಯದ ಎಸ್.ವ್ಹಿ.ಪಾಟೀಲ, ಎ.ಬಿ.ಜಕನೂರ, ಐ.ಎಮ್.ಶೇಡಶ್ಯಾಳೆ, ಬಿ.ಎನ್..ದಳವಾಯಿ, ಎ.ಎ.ದೇಸಾಯಿ ಸೇರಿದಂತೆ ಅನೇಕ ನ್ಯಾಯವಾದಿಗಳು ಶಾಸಕರಾಗಿ, ಮಂತ್ರಿಗಳಾಗಿ ಮತ್ತು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುವ ಮೂಲಕ ಅಥಣಿ ನ್ಯಾಯಾಲಯದ ಹಿರಿಮೆ ಹೆಚ್ಚಿಸಿದ್ದಾರೆ. ಅನೇಕ ವರ್ಷಗಳ ಹೋರಾಟದ ಫಲವಾಗಿ ಇಂದು ಅಥಣಿಯಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಸ್ಥಾಪನೆಯಾಗುತ್ತಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ. ವಕೀಲರ ಮತ್ತು ಕಕ್ಷಿದಾರರ ಹಿತದೃಷ್ಟಿಯಿಂದ ಅಥಣಿಗೆ ಜಿಲ್ಲಾ ನ್ಯಾಯಾಲಯ ಮಂಜೂರಾಗಿರುವುದು ಅನೇಕ ವರ್ಷಗಳ ಕನಸು ಈಡೇರಿದಂತಾಗಿದೆ.ಇಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾಗುವುದರಿಂದ ಕಕ್ಷಿದಾರನ ಮನೆಗೆ ನ್ಯಾಯದಾನ ಸಿಕ್ಕಂತಾಗಿದೆ ಎಂದರು.
ವಕೀಲರ ಸಂಘದ ಮಿತೇಶ ಪಟ್ಟಣ, ಬಿ ಬಿ ಬಿಸಲಾಪೂರ, ಎಮ್ ಸಿ ದುಂಡಿ. ಎಸ್ ಎ ಸಂಕ, ಎಸ್ ಬಿ ಪತ್ತಾರ, ಎನ್ ಬಿ ಕನಾಳ,
ಪಿ ಪಿ ಮೋರೆ, ಎಸ್ ಎನ್ ಕೋಟುರಮಠ, ನಿಂಗಪ್ಪ ಖೋಖಲೆ. ಆರ್ ಎನ್ ಕುಲ್ಲೋಳಿ, ಎಸ್ ಆರ್ ಪಾಟೀಲ, ಪಿ ಎಂ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.