70ರಷ್ಟು ಅರ್ಜಿ ಸ್ವೀಕಾರ–ವಾರದೊಳಗೆ ಉತ್ತರ  : ಹೊಸಪೇಟೆಯಲ್ಲಿ ತಾಲೂಕುಮಟ್ಟದ ಜನಸ್ಪಂದನ.
ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.03: ಇಲ್ಲಿ ಮಂಗಳವಾರ ನಡೆದ ಹೊಸಪೇಟೆ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ 70ರಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಂದು ವಾರದೊಳಗೆ ಕೆಲಸ ಆಗುತ್ತದೋ, ಇಲ್ಲವೋ ಎಂಬುದನ್ನು ತಿಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ತಿಳಿಸಿದರು.
ಸಭೆಯ ಬಳಿಕ ಮಾಧ್ಯಮದವರಿಗೆ ಈ ವಿಷಯ ತಿಳಿಸಿದ ಅವರು, ಹೊಸಪೇಟೆ ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ, ರೇಷ್ಮೆ, ಕೆಕೆಆರ್‌ಟಿಸಿ ಸಹಿತ ಹಲವು ಇಲಾಖೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.
ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಹೊಸಪೇಟೆಯಲ್ಲಿ ಅರ್ಜಿ ಸ್ವೀಕಾರ ಪ್ರಮಾಣ ಕಡಿಮೆ ಇರುವುದಕ್ಕೆ ಇಲ್ಲಿ ಸಮಸ್ಯೆ ಇಲ್ಲವೇ ಇಲ್ಲ ಎಂದು ಭಾವಿಸಬೇಕಿಲ್ಲ. ಪ್ರತಿದಿನ ನಮ್ಮ ಕಚೇರಿಗೆ 15ರಿಂದ 20ರಷ್ಟು ಅರ್ಜಿಗಳು ಬರುತ್ತಲೇ ಇರುತ್ತವೆ. ಜಿಲ್ಲಾಡಳಿತ ಇಲ್ಲೇ ಇರುವುದರಿಂದ ಜನರಿಗೆ ಅರ್ಜಿ ಸಲ್ಲಿಸಲು ಅನುಕೂಲವಿದೆ. ಇತರ ತಾಲ್ಲೂಕುಗಳಿಗೆ ನಾವೇ ಹೋದಾಗ ಅವರು ದೊಡ್ಡ ಸಂಖ್ಯೆಯಲ್ಲಿ ತಮ್ಮ ಅಹವಾಲು ನೀಡಲು ಮುಂದೆ ಬರುತ್ತಾರೆ’ ಎಂದು ಹೇಳಿದರು.
ಬಡಾವಣೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವೊಂದು ಅಭಿವೃದ್ಧಿಗೆ ಸಂಬಂಧಿಸಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಫಾರಂ ನಂ.3 ನೀಡಲು ಸಾಧ್ಯ. ನಿವೇಶನಗಳನ್ನು ಖರೀದಿಸುವ ಮೊದಲು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವ, ಕಾನೂನು ಸಲಹೆ ಪಡೆಯುವ ಕೆಲಸ ಮಾಡಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ’ ಎಂದು ಹೇಳಿದರು.
ಒಬ್ಬರಿಗೆ ವಿಧವಾ ವೇತನ, ಮೂವರಿಗೆ ವೃದ್ಧಾಪ್ಯ ವೇತನವನ್ನು ಸ್ಥಳದಲ್ಲೇ ನೀಡಲಾಗಿದೆ ಎಂದ ಅವರು, ಆಶ್ರಯ ಸಮಿತಿಯ ಅಡಿಯಲ್ಲಿ ಎಲ್ಲರಿಗೂ ಮನೆ ನೀಡಲು ಸಾಧ್ಯವಾಗಲಾರದು, ಆದರೆ ಮೀಸಲಾತಿ, ಅರ್ಹತೆ ನೋಡಿಕೊಂಡು ಸಾಧ್ಯವಿರುವ ಮಟ್ಟಿಗೆ ಮನೆಗಳನ್ನು ಒದಗಿಸಲು ಪ್ರಯತ್ನ ಸಾಗಿದೆ ಎಂದರು.
ಪಿಡಿಒಗಳು, ಸಿಆರ್‌ಪಿ, ಬಿಆರ್‌ಪಿ, ಅಂಗನವಾಡಿ ಮೇಲ್ವಿಚಾರಕರಂತಹ ತಳ ಮಟ್ಟದ ಅಧಿಕಾರಿಗಳು ಜನಸ್ಪಂದನ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಹಲವು ಸಮಸ್ಯೆಗಳಿಗೆ ಅವರಿಂದಲೇ ಸ್ಥಳದಲ್ಲೇ ಪರಿಹಾರ ಸಿಗುತ್ತದೆ. ವಿಳಂಬವಾದಾಗ ಹಲವರಿಗೆ ಅದುವೇ ದೊಡ್ಡ ತಲೆನೋವಾಗುತ್ತದೆ ಎಂದರು.
ಇದಕ್ಕೆ ಮೊದಲು  ತಾಲ್ಲೂಕಿನಲ್ಲಿ ಕೆಲವು ಅಂಗನವಾಡಿ ಬಾಡಿಗೆ ಕಟ್ಟಡಗಳಿಗೆ ಮೂರು ತಿಂಗಳಿಂದ ಬಾಡಿಗೆ ಪಾವತಿಸಿಲ್ಲ, ಕೆಲವೊಂದು ಶಾಲೆಗಳ ಆವರಣದಲ್ಲಿ ಅಂಗನವಾಡಿಗಳನ್ನು ಆರಂಭಿಸಬಹುದಾದರೂ ಅದಕ್ಕೆ ಅನುಮತಿ ಕೊಟ್ಟಿಲ್ಲ ಮೊದಲಾದ ದೂರುಗಳನ್ನು ಕೇಳಿ ಜಿಲ್ಲಾಧಿಕಾರಿ ಅಚ್ಚರಿಪಟ್ಟರು. ಅಂಗನವಾಡಿ ಮೇಲ್ವಿಚಾರಕರನ್ನು ಕರೆಸಿ ತರಾಟೆಗೂ ತೆಗೆದುಕೊಂಡರು.
ಸಹಕಾರಿ ಸಂಘ ಪಂಗನಾಮ: ಅಹನಾ ಸಹಕಾರಿ ಸಂಘವು ತನ್ನ ಗ್ರಾಹಕರಿಗೆ 50 ಕೋಟಿಯಿಂದ 60 ಕೋಟಿಯಷ್ಟು ಠೇವಣಿ ವಾಪಸ್‌ ಮಾಡುವುದು ಬಾಕಿ ಇದೆ, ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಡಿ.ಸಿ ಅವರು ತಕ್ಷಣ ಹಣ ತೆಗೆಸಿಕೊಡಬೇಕು, ಪಂಗನಾಮ ಹಾಕಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ದುಡ್ಡು ಕಳೆದುಕೊಂಡ ಹಲವು ಗ್ರಾಹಕರು ಅಳಲು ತೋಡಿಕೊಂಡರು.
ದೇವಲಾಪುರದಲ್ಲಿ ಕೆಕೆಆರ್‌ಟಿಸಿ ಬಸ್‌ಗಳಿಗೆ ನಿಲುಗಡೆ ನೀಡಬೇಕು ಎಂದು ಹೊರಡಿಸಿದ ಆದೇಶವನ್ನು ಜಾರಿಗೆ ತರದಿರುವ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಡಿ.ಸಿ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷ ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ, ಡಿಸಿಎಫ್‌ ಅರ್ಸಲನ್‌, ಎಎಸ್‌ಪಿ ಸಲೀಂ ಪಾಷಾ, ಉಪವಿಭಾಗಾಧಿಕಾರಿ ಮೊಹಮ್ಮದ್‌ ಅಲಿ ಅಕ್ರಂ ಷಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದ್ಗಲ್‌, ಡಿಎಚ್‌ಒ ಡಾ.ಎಲ್‌.ಆರ್.ಶಂಕರ್ ನಾಯ್ಕ್ ಇತರರು ಹಾಜರಿದ್ದರು.