ಕಾನ್ಷಿರಾಂ ವಿಚಾರಧಾರೆ ಜನರಿಗೆ ತಲುಪಿಸಿ
ಬೆಂಗಳೂರು, ಜು.೩-ಬಹುಜನ ನಾಯಕ ಕಾನ್ಷಿರಾಂ ಹಾಗೂ ಪಕ್ಷದ ವಿಚಾರಧಾರೆಗಳು ಜನರಿಗೆ ತಲುಪಿಸಲು ತಳ್ಳದಲ್ಲಿರುವ ಕಾರ್ಯಕರ್ತರು ಮುಂದಾಗಬೇಕು ಎಂದು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದ್ದಾರೆ.
ನಗರದಲ್ಲಿಂದು ಬಿಎಸ್ಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಜ್ಯ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾನ್ಷಿರಾಂ ಅವರು ಶೋಷಿತರು ಹಾಗೂ ಹಿಂದುಳಿದ ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸದೃಢವಾಗಲು ಅವಿರತವಾಗಿ ಶ್ರಮಿಸಿದ್ದರು. ಇದೇ ವಿಚಾರದಡಿ ಬಿಎಸ್ಪಿ ಪಕ್ಷ ಈಗಲೂ ಕಾರ್ಯನಿರ್ವಹಿಸುತ್ತಿದ್ದು, ಇದರ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.
ಮನುವಾದಿ ಸಂಸ್ಕೃತಿಯನ್ನು ಹೊಂದಿರುವ ರಾಜಕೀಯ ಪಕ್ಷಗಳ ನಡೆಯನ್ನು ಎಚ್ಚರಿಕೆಯಿಂದ ಗಮನಿಸಬೇಕು. ಎಸ್ಸಿ,ಎಸ್ಟಿ,ಒಬಿಸಿ ಹಾಗೂ ಶೋಷಿತ ಸಮುದಾಯಗಳ ಹಿತ ಚಿಂತನೆ ಮಾಡುವ, ಬಡವರ ಅಭಿವದ್ಧಿಗೆ ಶ್ರಮಿಸುವ ಪಕ್ಷಗಳಿಗೆ ತಮ್ಮ ಮತ ನೀಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ನಿರ್ಣಾಯಕವಾಗಿದ್ದು ಅರ್ಹರಿಗೆ ಮತ ಹಾಕುವ ಮೂಲಕ ರಾಜಕೀಯ ಗಟ್ಟಿಗೊಳಿಸಬೇಕು ಕಾನ್ಷಿರಾಂ ಆಶಯಗಳನ್ನು ಈಡೇರಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಬಹುಜನ ಸಮಾಜ ಪಾರ್ಟಿ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬರದಿರುವ ಕಾರಣಗಳ ಬಗ್ಗೆ ಚರ್ಚಿಸಲಾಯಿತು. ಇದಕ್ಕೆ ಸೂಕ್ತವಾದ ಬದಲಾವಣೆಯೊಂದಿಗೆ ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸುವ ಹಲವಾರು ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಬಿಎಸ್ಪಿ ಕರ್ನಾಟಕ ರಾಜ್ಯ ಉಸ್ತುವಾರಿ ಡಾ.ಅಶೋಕ್ ಸಿದ್ದಾರ್ಥ, ರಾಜ್ಯ ಸಂಯೋಜಕರಾದ ನಿತಿನ್‌ಸಿಂಗ್, ಎಂ.ಗೋಪಿನಾಥ್, ಎಂ.ಕೃಷ್ಣ ಮೂರ್ತಿ, ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮುನಿಯಪ್ಪ, ವಾಸು, ದಸ್ತಿಗೀರ್ ಮುಲ್ಲಾ, ಶಿವಮ್ಮಾ, ಅನ್ನದಾನಪ್ಪಾ, ಅಶೋಕ ಚಕ್ರವರ್ತಿ, ಪ್ರಮುಖರಿದ್ದರು.