ಕರ್ನಾಟಕ ಭವನದ ನೌಕರನ ಆತ್ಮಹತ್ಯೆ
ಬಳ್ಳಾರಿ,ಜು.೩- ದೆಹಲಿಯ ಕರ್ನಾಟಕ ಭವನದಲ್ಲಿ ಅಡುಗೆ ವಿಭಾಗದ ನೌಕರರೊಬ್ಬರು ಕೂಡ್ಲಿಗಿ ತಾಲೂಕಿನ ಎಂ.ಬಿ.ಅಯ್ಯನಹಳ್ಳಿ ಹೊಸಹಳ್ಳಿ ಹೊರವಲಯದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಎಂ.ಬಿ. ಅಯ್ಯನಹಳ್ಳಿಯ ಮಾರುತಿ (೩೫) ನೇಣಿಗೆ ಶರಣಾದ ದುರ್ದೈವಿ. ಕೂಡ್ಲಿಗಿ ತಾಲೂಕು ಎಂ.ಬಿ. ಅಯ್ಯನಹಳ್ಳಿ ನಿವೃತ್ತ ಶಿಕ್ಷಕ ರಾಮಣ್ಣನವರ ಮಗನಾದ ಈ ಯುವಕ ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ವಿಭಾಗದ ನೌಕರನಾಗಿದ್ದನು. ಈತ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪತ್ನಿಯೊಂದಿಗೆ ಕಳೆದ ಜೂನ್ ೨೭ರಂದು ದೆಹಲಿಯಿಂದ ನಗರಕ್ಕೆ ಬಂದು ನಂತರ ಚಳ್ಳಕೆರೆಗೆ ಬಂದು ಪತ್ನಿಯನ್ನು ತವರು ಮನೆಗೆ ಬಿಟ್ಟು ಹೆತ್ತವರನ್ನು ನೋಡಿಕೊಂಡು ಬರಲು ಎಂ.ಬಿ. ಅಯ್ಯನಹಳ್ಳಿಗೆ ಬಂದಿದ್ದ. ಮಾನಸಿಕವಾಗಿ ನೊಂದಿದ್ದ ಈತ ಕಳೆದ ಜೂ.೧ರಂದು ನಸುಕಿನ ಜಾವ ಹೊಸಹಳ್ಳಿ ಹೊರವಲಯದ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಪತ್ನಿ ನೀಡಿದ ದೂರಿನಂತೆ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.