ಒಲ್ಡ್ ಸೀಟಿಯಲ್ಲಿನ ಅನಧಿಕೃತ ಸೆಡ್ ತೆರವಿಗೆ ಠಾಕೂರ್ ಆಗ್ರಹ
ಬೀದರ್: ಜು.3:ಹೊಸ ನಗರದಲ್ಲಿ ಫುಟ್ಪಾತ್ ಮತ್ತು ರಸ್ತೆ ಒತ್ತುವರಿಯಾಗಿದ್ದು, ಅನಧಿಕೃತ ಶೆಡ್ ಹಾಗೂ ಬಂಡಿಗಳ ತೆರವು ಕಾರ್ಯ ನಡೆದಿದ್ದು, ಅದನ್ನು ಓಲ್ಡ್ ಸಿಟಿಗೂ ವಿಸ್ತರಿಸುವದರ ಜೊತೆಗೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕುರಿತು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಪ್ರಯುಕ್ತ ಬೀದರನ ಹೊಸ ನಗರ ಅಂದರೆ ಗುಂಪಾ, ಮೋಹನ ಮಾರ್ಕೆಟ್ ಸೇರಿದಂತೆ ಹಲವು ಕಡೆಗಳಲ್ಲಿ ಫುಟಪಾತ್ ಮತ್ತು ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಅನಧಿಕೃತ ಶೆಡ್ ಹಾಗೂ ಬಂಡಿಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದ್ದು ಸ್ವಾಗತಾರ್ಹ ಕಾರ್ಯವಾಗಿದೆ. ಇದರಿಂದ ರಸ್ತೆ ಅಗಲವಾಗುವುದರ ಜೊತೆಗೆ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುಕೂಲವಾಗುತ್ತದೆ. ಆದರೆ ಈ ಫುಟಪಾತ್ ಮತ್ತು ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಬೀದರನ ಓಲ್ಡ್ ಸಿಟಿಗೂ ವಿಸ್ತರಿಸಬೇಕು. ಏಕೆಂದರೆ ನಯಾಕಮಾನ್ ನಿಂದ ಚೌಬಾರಾ ವರೆಗೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಮಹ್ಮದ್ ಗವಾನ್ ಚೌಕ್ ವರೆಗೆ, ಉಸ್ಮಾನ್ ಗಂಜ್ ಸೇರಿದಂತೆ ಹಲವು ಕಡೆಗಳಲ್ಲಿ ಫುಟಪಾತ್ ಮೇಲೆ ಹಣ್ಣಿನ ಬಂಡಿ, ಚಹಾ ಬಂಡಿ ಮತ್ತು ಇನ್ನಿತರ ವ್ಯಾಪಾರ ಮಾಡುವ ವ್ಯಾಪಾರಸ್ಥರು ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ಜನ ಓಡಾಡಲು ತುಂಬಾ ಕಷ್ಟವಾಗುತ್ತಿದೆ. ಟ್ರಾಫಿಕ್ ಜಾಮ್ ಆಗಿ ಗಂಟೆಗಟ್ಟಲೆ ಸಾರ್ವಜನಿಕರು ರಸ್ತೆ ಮೇಲೆ ನಿಲ್ಲುವ ವಾಸ್ತವ ಸ್ಥಿತಿ ಅಲ್ಲಿದೆ.
ಆದ್ದರಿಂದ ಓಲ್ಡ್ ಸಿಟಿಯಲ್ಲೂ ಫುಟಪಾತ್ ಮತ್ತು ರಸ್ತೆ ಒತ್ತುವರಿ ಮಾಡಿಕೊಂಡಿರುವವರ ತೆರವು ಕಾರ್ಯಾಚರಣೆಯನ್ನು ಭೇದಭಾವ ಮಾಡದೆ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ.
ಈಗಾಗಲೇ ಬೀದರ ಹೊಸ ನಗರದ ವಿವಿಧ ಕಡೆಗಳಲ್ಲಿ ತೆರವುಗೊಳಿಸಿದ ಫುಟಪಾತ್ ವ್ಯಾಪಾರಿಗಳು ಬೀದಿಗೆ ಬಂದಿದ್ದು, ಅವರ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಅವರ ವ್ಯಾಪಾರಕ್ಕಾಗಿ ಬೇರೆಡೆಗೆ ಸ್ಥಳಾವಕಾಶದ ಅನುಕೂಲ ಮಾಡಿಕೊಡಬೇಕು ಮತ್ತು ಅವರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.