ಸ್ವಚ್ಛತೆಯ ಅರಿವು ಪ್ರತಿಯೊಬ್ಬರಲ್ಲಿ ಜಾಗೃತವಾಗಲಿ:ಬಸವರಾಜ ಬಬಲಾದ
ಇಂಡಿ:ಜು.3: ಗ್ರಾಮದ ದೇವಾಲಯ, ಆಸ್ಪತ್ರೆ, ಶಾಲೆಯ ಆವರಣ, ರಸ್ತೆ ಹಾಗೂ ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿಡುವುದು ಎಲ್ಲರ ಕರ್ತವ್ಯ ಎಂದು ಪಿಡಿಓ ಬಸವರಾಜ ಬಬಲಾದ ಹೇಳಿದರು.
ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಅಡಿಯಲ್ಲಿ ಹಮ್ಮಿಕೊಂಡ ‘ಆರೋಗ್ಯ ಜಾಗೃತಿ ಅಭಿಯಾನ’ವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛತೆಯಿಲ್ಲದಿದ್ದರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಸ್ವಚ್ಛತೆಯ ಅರಿವು ಪ್ರತಿಯೊಬ್ಬರಲ್ಲಿ ಜಾಗೃತಗೊಳ್ಳಬೇಕು ಎಂದು ಹೇಳಿದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಮಾತನಾಡಿ, ದೇಶದ ಗ್ರಾಮೀಣ ಆರೋಗ್ಯ ಪರಿಸ್ಥಿತಿ ಸುಧಾರಿಸುವಲ್ಲಿ ಎಲ್ಲರ ಶ್ರಮ ಬಹುಮುಖ್ಯ. ತಾಯಿ-ಮಗುವಿನ ಮರಣ ಪ್ರಮಾಣ ಇಳಿಸಬೇಕು. ಡೆಂಗ್ಯೂ ರೋಗ ತಡೆಗಟ್ಟುವ ಪ್ರಯತ್ನ ಎಲ್ಲರೂ ಮಾಡಬೇಕು ಎಂದು ಹೇಳಿದರು.
ಯುಬಿಎಸ್ ಶಿಕ್ಷಕ ಸಂತೋಷ ಬಂಡೆ ಮಾತನಾಡಿ,
ಆರೋಗ್ಯ ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನೈರ್ಮಲ್ಯ ಇರುವಲ್ಲಿ ಆರೋಗ್ಯ ಇರುತ್ತದೆ.
ನೈರ್ಮಲ್ಯದ ಕೊರತೆಯಿಂದ ದೇಶದಲ್ಲಿ ಶೇ.80 ರಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಈ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ನೈರ್ಮಲ್ಯದ ಅರಿವಿನ ಜಾಗೃತಿ ಹೆಚ್ಚಾಗಬೇಕು ಎಂದು ಹೇಳಿದರು.
ಯುವ ಮುಖಂಡ ಪರಶುರಾಮ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ ಹಲಸಂಗಿ, ಶಿವಾನಂದ ಪೂಜಾರಿ, ಭೀಮರಾಯ ಜೇವೂರ, ಗೋಪಾಲ ಗಿಣ್ಣಿ ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗ, ಶಿಕ್ಷಕ ಎಸ್ ಆರ್ ಚಾಳೇಕರ, ಸಮುದಾಯ ಆರೋಗ್ಯ ಅಧಿಕಾರಿ ಲಕ್ಷ್ಮೀ ಮೇತ್ರಿ, ಕಿರಿಯ ಆರೋಗ್ಯ ಕಾರ್ಯಕರ್ತೆ ಎಸ್ ಎಸ್ ಹೊನ್ನಮೊರೆ, ಆಶಾ ಕಾರ್ಯಕರ್ತೆಯರಾದ ಶೃತಿ ಬೇನೂರ, ಲಕ್ಷ್ಮೀ ಶಿವೂರ, ಇಂದುಮತಿ ಹಳ್ಳದಮನಿ, ಕಾಶೀಬಾಯಿ, ಶ್ಯಾಮಬಾಯಿ ಹರವಾಳ, ಬೌರಮ್ಮ ಚೀಲಿ, ಅಂಗನವಾಡಿ ಕಾರ್ಯಕರ್ತೆ ದೀಪಾ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.