ಸಾರ್ವಜನಿಕರ ಕೆಲಸದಲ್ಲಿ ವಿಳಂಬ ಮಾಡಿದರೆ ಕ್ರಮ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.03: ತಾಲ್ಲೂಕಿಗೆ ಮಂಜೂರಾಗಿರುವ ಮನೆಗಳನ್ನು ನಿಗಧಿತ ಸಮಯದಲ್ಲಿ ಮುಕ್ತಾಯಗೊಳಿಸುವ ಜವಾಬ್ದಾರಿ ನಿಮ್ಮ ಕರ್ತವ್ಯವಾಗಿದ್ದು ವಿಳಂಬವಾದಲ್ಲಿ ನಿಮ್ಮ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಹೆಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರ ಕಳೆದ 2-3 ವರ್ಷಗಳಿಂದ 2475 ಮನೆಗಳನ್ನು ನೀಡಿದೆ ಆದರೆ ಅವುಗಳ ಪೈಕಿ ನೀಡಿರುವ 1005 ಮನೆಗಳ ಕಾಮಗಾರಿಯನ್ನು ಆರಂಭಿಸಿಯೇ ಇಲ್ಲ. ಇನ್ನು ಹಲವು ಪ್ರಗತಿಯಲ್ಲಿವೆ. ವರ್ಷಾನುಗಟ್ಟಲೆ ಮನೆ ನಿರ್ಮಾಣ ಮಾಡಿಸಲು ನಿಮಗೆ ಸಾಮಥ್ರ್ಯ ಇಲ್ಲವೇ. ಮನೆ ಕಾಮಗಾರಿ ಕೆಲಸಕ್ಕೆ ಲಂಚಕ್ಕೆ ಬೇಡಿಕೆ ಇಡುವುದು ಸರಿಯಾದುದಲ್ಲ. ಜಿಪಿಎಸ್ ಸೇರಿದಂತೆ ಎಲ್ಲಾ ಕೆಲಸಕ್ಕೆ ರೈತರಿಂದ ಹಣ ಕೇಳುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಬರಗಾಲದಿಂದ ಕಂಗೆಟ್ಟಿರುವ ರೈತರಿಂದ ಹಣ ಪಡೆಯುವುದು ಸರಿಯಲ್ಲ. ಸರ್ಕಾರದ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯ. ಪಿಡಿಓಗಳು ಹಾಗೂ ಕಾರ್ಯದರ್ಶಿಗಳು ಗ್ರಾಮ ಪಂಚಾಯತಿಗೆ ನಿಗದಿತ ವೇಳೆಗೆ ಹಾಜರಾಗಬೇಕು. ರೈತರ, ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ ತೋರುವ ಅಧಿಕಾರಿಗಳು ನನ್ನ ಕ್ಷೇತ್ರಕ್ಕೆ ಬೇಡ. 2 ವರ್ಷಗಳಾದರೂ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಇಓ ಸತೀಶ್ ರವರಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಓ ಸತೀಶ್, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್, ನರೇಗಾ ಆಡಳಿತ ಸಹಾಯಕ ನಿರ್ದೇಶಕ ನರಸಿಂಹರಾಜು, ನರೇಗಾ ಎಡಿ ಉಮಾಶಂಕರ್, ಶಾಸಕರ ಆಪ್ತಸಹಾಯಕ ಪ್ರತಾಪ್, ಕುಮಾರಸ್ವಾಮಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳ ಪಿಡಿಓ ಗಳು ಹಾಜರಿದ್ದರು.