ವಚನ ಪಿತಾಮಹ ಫ.ಗು.ಹಳಕಟ್ಟಿ ಜನ್ಮದಿನಾಚರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.03: ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ 144ನೇ ಜನ್ಮದಿನವನ್ನು ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆಚರಿಸಲಾಯಿತು.
ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ರ್ಪಾಚನೆ ಮಾಡಿ ಪೂಜೆ ಸಲ್ಲಿಸಿದ ಅತಿಥಿಗಳು ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಹಳಕಟ್ಟಿಯವರ ಪರಿಶ್ರಮವನ್ನು ಸ್ಮರಿಸಿದರು.
ಹಳಕಟ್ಟಿಯವರನ್ನು ಕುರಿತು ಮಾತನಾಡಿದ ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ತಾಳೆಗರಿಗಳಲ್ಲಿ ದೂಳು ಹಿಡಿದು, ಹುಳುಹಿಡಿದು ಹಾಳಾಗುವ ಹಂತದಲ್ಲಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಅಧ್ಯಯನ ಮಾಡಿ ಪರಿಷ್ಕರಿಸಿ ಅವುಗಳನ್ನು ಪ್ರಕಟಿಸುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕಾರ್ಯವನ್ನು ಮಾಡಿದವರು ನಮ್ಮ ಹಳಕಟ್ಟಿ ಎಂದರು. ವೃತ್ತಿಯಲ್ಲಿ ವಕೀಲರಾಗಿದ್ದರೂ ವಚನ ಸಾಹಿತ್ಯ ವಾಙ್ಞಯಕ್ಕೆ ಮನಸೋತು ತಮ್ಮ ಬದುಕಿನ ಸಂಪೂರ್ಣ ಅವಧಿಯನ್ನು ವಚನ ಸಾಹಿತ್ಯ ಸಂರಕ್ಷಣೆ ಮತ್ತು ಮುದ್ರಣಕ್ಕೆ ಮೀಸಲಿಟ್ಟ ಹಳಕಟ್ಟಿ ಕರ್ನಾಟಕದ ಮ್ಯಾಕ್ಸಮುಲ್ಲರ್ ಎಂದೇ ಜನಜನಿತರಾಗಿದ್ದಾರೆ. ಶಿವಾನುಭವ ಪತ್ರಿಕೆ ಹಾಗೂ ಶಿವಾನುಭವ ಗ್ರಂಥ ಮಾಲೆ ಸ್ಥಾಪಿಸಿ ವಚನ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ ಹಳಕಟ್ಟಿ ತಾವು ಸಂಗ್ರಹಿಸಿದ ವಚನ ಸಾಹಿತ್ಯವನ್ನು ಮುದ್ರಿಸುವ ಸಂಕಲ್ಪದಿಂದ ಹಿತಚಿಂತಕ ಮುದ್ರಣಾಲಯವನ್ನು ಸ್ಥಾಪಿಸಿದರು. ಜಾತಿರಹಿತ ಸಮ ಸಮಾಜ ನಿರ್ಮಾಣ ವಚನಕಾರರ ಮೂಲ ಆಶಯ. ಜಗತ್ತಿನ ಯಾವುದೇ ಭಾಷಿಕ ಸಾಹಿತ್ಯದಲ್ಲಿಯೂ ವಚನ ಸಾಹಿತ್ಯದಲ್ಲಿ ಕಂಡು ಬರುವಂತಹ ಮಾನವೀಯ ಮೌಲ್ಯಗಳು ಕಂಡುಬರುವುದಿಲ್ಲ. ವಚನಗಳ ಮೂಲಕ ಸಾಮಾಜಿಕ ಬದಲಾವಣೆಯ ಕಿಡಿಹೊತ್ತಿಸಿದ ವಚನಕಾರರ ಸಾಹಿತ್ಯ ಭಾರತೀಯ ಸಾಹಿತ್ಯದ ಅಮೂಲ್ಯ ರತ್ನಗಳು. ಇಂತಹ ಅಮೂಲ್ಯ ಸಾಹಿತ್ಯ ರತ್ನಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ ಹಳಕಟ್ಟಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿದ್ದಾರೆಂದು ಕೆ.ಎಂ.ಶಿವಪ್ಪ ಅಭಿಪ್ರಾಯಪಟ್ಟರು.
ಉಪ ತಹಸೀಲ್ದಾರ್ ಸೈಯದ್ ಅಸಮದುಲ್ಹಾ ಖಾದ್ರಿ, ಶಿರಸ್ತೆದಾರ್ ವೇಣುಗೋಪಾಲ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಕಂದಾಯ ಇಲಾಖೆಯ ಅಮೃತ್ ರಾಜ್, ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ್, ಆರೋಗ್ಯ ಇಲಾಖೆಯ ಶೀಳನೆರೆ ಸತೀಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಶಿವಸಿದ್ದು, ಆಸರೆ ಸೇವಾ ಸಮಾಜದ ಹೆಚ್.ಬಿ.ಮಂಜುನಾಥ್, ಪರಿಶಿಷ್ಠ ಜಾತಿ ಮೋರ್ಚಾ ಅಧ್ಯಕ್ಷ ಯಾಲಾಕಪ್ಪ ಸೇರಿದಂತೆ ಹಲವರಿದ್ದರು