ಕ್ಷೀರಭಾಗ್ಯ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ
ಕೋಲಾರ,ಜು,೩-ಏರಿಕೆ ಆಗಿರುವ ೨ ರೂ. ಹಾಲಿನ ಗ್ರಾಹಕರ ಹಣವನ್ನು ರೈತರಿಗೆ ನೀಡಿ ಹತ್ತು ತಿಂಗಳಿಂದ ಬಿಡುಗಡೆಯಾಗದ ಕ್ಷೀರಭಾಗ್ಯ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿ ಬರದಿಂದ ತತ್ತರಿಸಿರುವ ರೈತರ ರಕ್ಷಣೆಗೆ ಒಕ್ಕೂಟ ನಿಲ್ಲಬೇಕೆಂದು ರೈತ ಸಂಘದಿಂದ ವ್ಯವಸ್ಥಾಪಕರಿಗೆ ಮನವಿಸಲ್ಲಿಸಿದರು.
ಹಾಲು ಉತ್ಪಾದನೆ ಹೆಚ್ಚಳವಾಗಿದೆ ಎಂದು ೫೦ ಎಂ.ಎಲ್ ಪ್ಯಾಕೇಟ್ ಹೆಚ್ಚಳ ಮಾಡಿ ಗ್ರಾಹಕರಿಗೆ ೨ ರೂ ಹೆಚ್ಚಳ ಮಾಡಿರುವ ಹಾಲಿನ ದರವನ್ನು ರೈತರಿಗೆ ನೀಡುವ ಮುಖಾಂತರ ಸರ್ಕಾರ ರೈತರ ರಕ್ಷಣೆಗೆ ನಿಲ್ಲಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒಕ್ಕೂಟದ ವ್ಯವಸ್ಥಾಪಕರ ಮುಖಾಂತರ ಸರ್ಕಾರವನ್ನು ಒತ್ತಾಯಿಸಿದರು.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹೈನೋಧ್ಯಮದ ಅಭಿವೃದ್ದಿಗೆ ಸರ್ಕಾರ ಮನಸ್ಸು ಮಡಬೇಕಾಗಿದೆ. ಕಳೆದ ೧೦ ತಿಂಗಳಿಂದ ರೈತರಿಗೆ ಕ್ಷೀರಭಾಗ್ಯ ಪ್ರೋತ್ಸಾಹ ಧನ, ಸೇರಿಲ್ಲ ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಮುಂಗಾರು ಮಳೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಸೇರಿದಂತೆ ಹಲವು ಖರ್ಚು ವೆಚ್ಚಗಳಿಗೆ ಹೈನುಗಾರಿಕೆಯಿಂದ ಬರುವ ಹಣವೇ ಆದಾಯವಾಗಿದೆ. ಆದರೆ ೧೦ ತಿಂಗಳ ಹಣವನ್ನು ಬಾಕಿ ಉಳಿಸಿಕೊಂಡಿರುವುದು ನ್ಯಾಯವಲ್ಲವೆಂದು ಸರ್ಕಾರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಟ್ಟು ೧೪ ಹಾಲು ಒಕ್ಕೂಟಗಳಿದ್ದು, ಇದರಲ್ಲಿ ೩೫ ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಸಂಘಗಳಲ್ಲಿ ೨೪ ಲಕ್ಷ ಮಂದಿ ನೊಂದಾಯಿತ ಹಾಲು ಉತ್ಪಾದಕರಿದ್ದಾರೆ. ಇವರಲ್ಲಿ ನಿತ್ಯ ೯ ಲಕ್ಷ ಮಂದಿ ರೈತರು ಹಾಲು ಸರಬರಾಜು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಹೈನುಗಾರಿಕೆ ನಡೆಸುವ ರೈತರಿಗೆ ಅನುಕೂಲವಾಗಿಲಿ ಎಂಬ ಕಾರಣದಿಂದ ಕ್ಷೀರದಾರೆ ಹೆಸರಿನಲ್ಲಿ ಪ್ರತಿಯೊಬ್ಬ ರೈತರಿಗೆ ಲೀಟರ್‌ಗೆ ೫ ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದ್ದು, ಈಗ ಆ ಹಣವನ್ನು ಬಿಡುಗಡೆ ಮಾಡದೆ ಸಂಕಷ್ಟದಲ್ಲಿ ಹಾಲು ಉತ್ಪಾದಕರು ಸಿಲುಕಿದ್ದಾರೆಂದು ಸರ್ಕಾರಕ್ಕೆ ಮನವರಿಕೆ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಸರ್ಕಾರ ಏರಿಕೆ ಮಾಡಿರುವ ೨ ರೂ ಹಾಲಿನ ದರವನ್ನು ರೈತರಿಗೆ ಕೊಡಲು ಸರ್ಕಾರ ಮನಸ್ಸು ಮಾಡಬೇಕು ಜೊತೆಗೆ ಪ್ರೋತ್ಸಾಹ ಧನವನ್ನು ಹಂತ ಹಂತವಾಗಿ ಈ ವಾರದಲ್ಲಿ ಬಿಡುಗಡೆ ಮಾಡುವ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಕಾಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಕೇಶವ, ಸುಪ್ರೀಂ ಚಲ, ಮಂಜುಳಾ, ರತ್ನಮ್ಮ, ವೆಂಕಟಮ್ಮ, ಬೈರಮ್ಮ, ಬಯ್ಯಮ್ಮ ಗೀರೀಶ್, ಮಂಗಸಂದ್ರ ತಿಮ್ಮಣ್ಣ ಇದ್ದರು.