ಪುರುಷೋತ್ತಮ, ರಾಧಿಕಾ ಬೇವಿನಕಟ್ಟಿಗೆ ಜಂಗಮಶೆಟ್ಟಿ ರಂಗ ಪ್ರಶಸ್ತಿ
ಕಲಬುರಗಿ,ಜು.2-ಇಲ್ಲಿನ ರಂಗ ಸಂಗಮ ಕಲಾ ವೇದಿಕೆ ನೀಡುವ ಪ್ರತಿಷ್ಠಿತ ರಾಜ್ಯ ಮಟ್ಟದ 11ನೇ ವರ್ಷದ ವಾರ್ಷಿಕ ” ಶ್ರೀ ಎಸ್.ಬಿ.ಜಂಗಮಶೆಟ್ಟಿರಂಗ ಪ್ರಶಸ್ತಿಗೆ” ಹಿರಿಯರಂಗ ಪ್ರತಿಭೆ ಬಳ್ಳಾರಿಯ ಪುರುಷೋತ್ತಮ ಹಂದ್ಯಾಳ ಹಾಗೂ “ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿರಂಗ ಪ್ರಶಸ್ತಿಗೆ”ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ವೃತ್ತಿ ರಂಗಭೂಮಿಯ ನಟಿ ರಾಧಿಕಾ ವ್ಹಿ.ಬೇವಿನಕಟ್ಟಿ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ 10 ಸಾವಿರ ನಗದು ಹಾಗೂ ಪ್ರಶಸ್ತಿಫಲಕವನ್ನೊಳಗೊಂಡಿದೆ. ಈ ರಾಜ್ಯ ಮಟ್ಟದರಂಗ ಪ್ರಶಸ್ತಿ ಪ್ರದಾನ ಸಮಾರಂಭ ಜು.18 ರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯಲಿದೆ ಎಂದು
ರಂಗ ಸಂಗಮ ಕಲಾ ವೇದಿಕೆಯ ಪ್ರದಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
ಪುರುಷೋತ್ತಮ ಹಂದ್ಯಾಳ ಅವರು ಬಳ್ಳಾರಿ ತಾಲೂಕಿನ ಹಂದ್ಯಾಳ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ, ವೃತ್ತಿಯಲ್ಲಿ ಪತ್ರಿಕಾ ಛಾಯಾಗ್ರಾಹಕರಾದ ಹಂದ್ಯಾಳ ಅವರು ಮೂವತ್ತು ಮೂರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆÉ. ತಮ್ಮ ಶಾಲಾ ದಿನಗಳಲ್ಲಿಯೇ ರಂಗಭೂಮಿಗೆ ಪ್ರವೇಶಿಸಿದರು. ಕುರುಕ್ಷೇತ್ರ, ಧನಿಕರದೌರ್ಜನ್ಯ, ಕರ್ತವ್ಯದಕಾಣಿಕೆ, ಮಹಿಮಾಪುರ, ಕುಂಕುಮ ತಂದ ಕೈಲಾಸ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಕ್ತರಾತ್ರಿ ನಾಟಕದಲ್ಲಿಯ ಶಕುನಿ ಪಾತ್ರದಲ್ಲಿಯ ಇವರ ವಿಶಿಷ್ಟ ಅಭಿನಯಕ್ಕೆ “ಅಭಿನವ ಶಕುನಿ”ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಶಕುನಿಯ ಇವರ ಅಭಿನಯವನ್ನು ನಾಡೋಜ ಬೆಳಗಲಿ ವೀರಣ್ಣನವರು ಹಾಗೂ ನಾಡೋಜ ಸುಭದ್ರಮ್ಮ ಮನ್ಸೂರ್‍ರವರು ಮುಕ್ತ ಕಂಠದಿಂದ ಹೊಗಳಿದ್ದಾರೆ. ಬಳ್ಳಾರಿಯ ಕಾರಾಗೃಹದ ಖೈದಿಗಳ ಮನಃ ಪರಿವರ್ತನೆಗಾಗಿ ಖೈದಿಗಳಿಗಾಗಿ ನಾಟಕ ನಿರ್ದೇಶನವನ್ನು ಮಾಡಿರುವರು. ಕರೋನದ ಸಂಕಷ್ಟದಕಾಲದಲ್ಲಿ ಜನಜಾಗೃತಿಗಾಗಿಕಿರುಚಿತ್ರ ನಿರ್ಮಿಸಿ ಅಭಿನಯಿಸಿದ್ದಾರೆ. ಕನ್ನಡದ ನಾಲ್ಕು ಧಾರಾವಾಹಿಗಳಲ್ಲೂ ಪುರುಷೋತ್ತಮರವರು ಅಭಿನಯಿಸಿದ್ದಾರೆ.
ರಾಧಿಕಾ ವ್ಹಿ. ಬೇವಿನಕಟ್ಟಿ : 12ನೆಯ ವಯಸ್ಸಿನಲ್ಲಿಯೇ “ಬಸ್ ಕಂಡಕ್ಟರ್” ನಾಟಕದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ರಾಧಿಕಾ, ಓದಿದ್ದು ಕಡಿಮೆಯಾದರೂ ಎಂತಹ ಪಾತ್ರಕೊಟ್ಟರು ಒಂದೇ ದಿನದಲ್ಲಿ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ. ಮದುಮಗಳು, ಕಿತ್ತೂರಚೆನ್ನಮ್ಮ, ಸಂಗ್ಯಾ ಬಾಳ್ಯಾ, ಸಂಪತ್ತಿಗೆ ಸವಾಲ್, ಸಂತ ಸಕ್ಕುಬಾಯಿ, ಜಗಜ್ಯೋತಿ ಬಸವೇಶ್ವರ, ರೈತನ ಮಕ್ಕಳು ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಇವರು ಸಮರಸಿಂಹಿಣಿ ಬೆಳವಡಿ ಮಲ್ಲಮ್ಮ ನಾಟಕದಲ್ಲಂತೂ ಮಲ್ಲಮ್ಮನ ಪಾತ್ರದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ.
ಕಲಾವೈಭವ ಕಂಪನಿ, ಚಿತ್ತರಗಿ ಕಂಪನಿ, ಹುಚ್ಚೇಶ್ವರ ನಾಟ್ಯ ಸಂಘ, ಕುಮಾರೇಶ್ವರ ನಾಟ್ಯ ಸಂಘ, ಏಣಗಿ ಬಾಳಪ್ಪನವರ ಕಂಪನಿ ಹೀಗೆ ಹಲವಾರು ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ಕಂಪನಿ ಕಟ್ಟಿ, ಹತ್ತು ವರ್ಷ ನಡೆಸಿದ್ದಾರೆ. ಏಣಗಿ ನಟರಾಜಅವರ ನಿರ್ದೇಶನದಲ್ಲಿ’ಕಿನ್ನರಿ’ ಮತ್ತು “ಇದು ಎಂತಾ ಲೋಕವಯ್ಯ”ಧಾರಾವಾಹಿಗಳಲ್ಲಿಯೂಅಭಿನಯಿಸಿದ್ದಾರೆ.